

ವಿಜಯವಾಣಿ ಸುದ್ದಿಜಾಲ
ಚಿತ್ರದುರ್ಗ: ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕದಿಂದ ಪೋಲಿಸ್ ಕವಾಯತು ಮೈದಾನದಲ್ಲಿ ಗುರುವಾರ ವಿನಯ್-ಕೋಟಿ ಸ್ಮರಾಣಾರ್ಥ ನಡೆದ ಆಹ್ವಾನಿತ ಪತ್ರಕರ್ತರ ಅಂತರ್ ಜಿಲ್ಲಾ ಕ್ರಿಕೆಟ್‌ನ ಫೈನಲ್ ಪಂದ್ಯಾವಳಿಯಲ್ಲಿ ಶಿವಮೊಗ್ಗ ದಾವಣಗೆರೆ ತಂಡವನ್ನು ಮಣಿಸಿ ಪ್ರಥಮ ಬಹುಮಾನದೊಂದಿಗೆ ‘ಮೀಡಿಯಾ ವಾರಿಯಸ್ಸ್ ಕಪ್’ ಮುಡಿಗೇರಿಸಿಕೊಂಡಿತು.
ಗೆಲುವು ಸಾಧಿಸಲು ಎರಡು ತಂಡಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಶಿವಮೊಗ್ಗ 5 ಓವರ್‌ಗಳಲ್ಲಿ 61 ರನ್ ಕಲೆಹಾಕಿತ್ತು. ದಾವಣಗೆರೆ ತಂಡ 47 ರನ್ ಪಡೆಯುವ ಮೂಲಕ ಕೊನೆಗೂ ದ್ವಿತೀಯ ಬಹುಮಾನ ಪಡೆಯುವಂತಾಯಿತು. ಚಿತ್ರದುರ್ಗ ತಂಡ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಯಿತು.
ಪಂದ್ಯ ಪುರುಷೋತ್ತಮನಾಗಿ ಶಿವಮೊಗ್ಗದ ಲೋಹಿತ್, ಚಿತ್ರದುರ್ಗದ ರಾಜು, ಸಿದ್ದು ಸತ್ಯಣ್ಣ, ಉತ್ತಮ ಬ್ಯಾಟ್ಸ್‌ಮೆನ್ ಆಗಿ ಕಿರಣ್, ಉತ್ತಮ ಬೌಲರ್ ಆಗಿ ವೀರೇಶ್ ಹಾಗೂ ಆಲ್‌ರೌಂಡರ್ ಆಗಿ ಒಳ್ಳಾರಿಯ ವೀರೇಶ್ ಬಹುಮಾನ ಪಡೆದುಕೊಂಡರು.
ಸಮಾರೋಪದಲ್ಲಿ ಬಹುಮಾನ ವಿತರಿಸಿ ಮಾತನಾಡಿದ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ಒಲಂಪಿಕ್‌ನಲ್ಲಿ ಪದಕ ಪಡೆಯಬೇಕಾದರೆ, ಪ್ರಾಥಮಿಕ ಹಂತದಿಂದಲೇ ಕ್ರೀಡೆಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು. ಜೊತೆಗೆ ಕ್ರೀಡಾಪಟುಗಳಿಗೆ ಉತ್ತಮ ಪ್ರೋತ್ಸಾಹ ನೀಡಬೇಕು ಎಂದು ಸಲಹೆ ನೀಡಿದರು.
ಫುಟ್‌ಬಾಲ್ ಗೆಲುವು ಸಾಧಿಸಿದಾಗ ದೇಶದಲ್ಲಿ ಕ್ರೀಡಾಭಿಮಾನಿಗಳು ಕ್ರೀಡಾಪಟುಗಳನ್ನು ಸ್ವಾಗತಿಸಿ ಸಂಭ್ರಮಿಸಿದರು. ಈ ರೀತಿಯಾದ ವಾತಾವರಣ ಎಲ್ಲೆಡೆ ನಿರ್ಮಾಣವಾಗಬೇಕಿದೆ ಎಂದರು.
ಜಿಪಂ ಸಿಇಒ ಎಂ.ಎಸ್. ದಿವಾಕರ್ ಮಾತನಾಡಿ, ಸದಾ ಒತ್ತಡದಲ್ಲೇ ಕೆಲಸ ಮಾಡುವ ಪತ್ರಕರ್ತರಿಗೂ ಕ್ರೀಡಾಕೂಟ ಅತ್ಯವಶ್ಯಕ. ಇದರಿಂದ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಲು ಸಹಕಾರಿಯಾಗಲಿದೆ. ಈ ಕ್ರೀಡಾಕೂಟ ಆಯೋಜಿಸಿ ನೊಂದ ಪತ್ರಕರ್ತರ ಕುಟುಂಬಕ್ಕೆ ಸಹಾಯ ಮಾಡುವುದು ಕೂಡ ಉತ್ತಮ ಬೆಳವಣಿಗೆ ಎಂದರು.
ಪತ್ರಕರ್ತರ ಸಂಘದ ಅಧ್ಯಕ್ಷ ದಿನೇಶ್ ಗೌಡಗೆರೆ ಮಾತನಾಡಿ, ಕಳೆದ ವರ್ಷ ಕೋವಿಡ್‌ನಿಂದ ಮೃತರಾದ ವಿನಯ್ ಮತ್ತು ಬಸವರಾಜ್ ಕೋಟಿ ಅವರ ಸವಿನೆನಪಿಗಾಗಿ ಈ ಪಂದ್ಯಾವಳಿ ಆಯೋಜಿಸಲಾಯಿತು ಎಂದು ತಿಳಿಸಿದರು.
ಇದೇ ವೇಳೆ ನಗರ, ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಕೆಲಸ ಮಾಡುವ ಪತ್ರಕರ್ತರಿಗೆ ನಿವೇಶನ ಮತ್ತು ವಸತಿ ಸೌಲಭ್ಯ ಕಲ್ಪಿಸುವಂತೆ ಶಾಸಕರು, ಜಿಪಂ ಸಿಇಒಗೆ ಮನವಿ ಸಲ್ಲಿಸಲಾಯಿತು.
ಪತ್ರಕರ್ತ ಸಿದ್ದರಾಜು, ಕುಮಾರಸ್ವಾಮಿ, ಉದ್ಯಮಿಗಳಾದ ತಿಪ್ಪೇಸ್ವಾಮಿ, ಡಿಎಆರ್‌ನ ಡಿವೈಎಸ್‌ಪಿ ಗಣೇಶ್ ಇತರರಿದ್ದರು.
ಚಿತ್ರ: ಸಿಟಿಡಿ 22 ಸ್ಪೋರ್ಟ್ಸ್
ಚಿತ್ರದುರ್ಗದಲ್ಲಿ ಗುರುವಾರ ಮುಕ್ತಾಯಗೊಂಡ ಅಂತರ್ ಜಿಲ್ಲಾ ಆಹ್ವಾನಿತ ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಶಿವಮೊಗ್ಗ ತಂಡ ಪ್ರಥಮ ಬಹುಮಾನ ಪಡೆದು ಸಂಭ್ರಮಿಸಿದ ಕ್ಷಣ. ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಜಿಪಂ ಸಿಇಒ ಎಂ.ಎಸ್.ದಿವಾಕರ್ ಇತರರಿದ್ದರು.