

ಶಿವಮೊಗ್ಗ: ನಾಡಹಬ್ಬ ಶಿವಮೊಗ್ಗ ದಸರಾವನ್ನು 1.5 ಕೋಟಿ ರೂ. ವೆಚ್ಚದಲ್ಲಿ ವೈಭವಯುತವಾಗಿ ಆಚರಿಸಲಾಗಿದೆ. ರಾಜ್ಯ ಸರ್ಕಾರ 20 ಲಕ್ಷ ರೂ. ಅನುದಾನ ನೀಡಿದ್ದು ಮತ್ತಷ್ಟು ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಮೇಯರ್ ಎಸ್.ಶಿವಕುಮಾರ್ ತಿಳಿಸಿದರು.
2.5 ಕೋಟಿ ರೂ. ವೆಚ್ಚದಲ್ಲಿ ಕಾರ್ಯಕ್ರಮವನ್ನು ರೂಪಿಸಲಾಗಿತ್ತು. ಬರಗಾಲ ಇದ್ದ ಕಾರಣ ಈ ಬಾರಿ 1.5 ಕೋಟಿ ರೂ.ಗೆ ಬಜೆಟ್ ಇಳಿಸಿಕೊಳ್ಳಲಾಯಿತು. ಆದರೂ ಯಾವುದೇ ಕೊರತೆ ಆಗದಂತೆ ನಾಡಹಬ್ಬವನ್ನು ಆಚರಿಸಿದ್ದು ವಿಶೇಷವಾಗಿತ್ತು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈ ಬಾರಿಯ ದಸರಾ ಮಹೋತ್ಸವ ಹತ್ತು ದಿನ ಅತ್ಯಂತ ವಿಜೃಂಭಣೆಯಿಂದ ನಡೆದಿದೆ. ಪಾಲಿಕೆಯಿಂದ ಆಯೋಜಿಸಿದ್ದ ದಸರಾ ಮಹೋತ್ಸವ ಯಶಸ್ಸು ಕಂಡಿದೆ. ವಿವಿಧ ಸಮಿತಿಗಳ ಮೂಲಕ 10 ದಿನವೂ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಸ್ಥಳೀಯ ಕಲಾವಿದರಲ್ಲದೆ ರಾಜ್ಯದ ವಿವಿಧೆಡೆಯ ಕಲಾವಿದರು ಭಾಗವಹಿಸಿದ್ದರು. ಎಂದರು.
ದಸರಾ ಮೆರವಣಿಗೆಗೆ ಕರೆತಂದಿದ್ದ ನೇತ್ರಾವತಿ ಆನೆ ಮರಿ ಶಿವಮೊಗ್ಗದಲ್ಲಿ ಮರಿ ಹಾಕಿದ್ದು ಕೂಡ ವಿಶೇಷವೇ ಆಗಿತ್ತು. ಈ ಬಗ್ಗೆ ಕೆಲ ಗೊಂದಲಗಳಿರುವುದು ನಿಜ. ಗರ್ಭಿಣಿ ಆನೆಯನ್ನು ಮೆರವಣಿಗೆಗೆ ಹೇಗೆ ಕರೆದುಕೊಂಡು ಬಂದರು ಎಂಬ ಪ್ರಶ್ನೆಗಳು ಸಾರ್ವಜನಿಕರಿಂದ ಬಂದಿವೆ. ಈ ಬಗ್ಗೆ ಅರಣ್ಯ ಅಧಿಕಾರಿಗಳೇ ಉತ್ತರಿಸಬೇಕಾಗಿದೆ. ಮರಿಯಾನೆಗೆ ಚಾಮುಂಡಿ ಎಂದು ಹೆಸರಿಡಲು ಪಾಲಿಕೆಯಿಂದ ಅರಣ್ಯ ಇಲಾಖೆಗೆ ಮನವಿ ಮಾಡಿದ್ದೇವೆ ಎಂದು ಹೇಳಿದರು.
ಉಪಮೇಯರ್ ಲಕ್ಷ್ಮೀ ಶಂಕರನಾಯ್ಕ, ಸದಸ್ಯರಾದ ರೇಖಾ ರಂಗನಾಥ್, ಅನಿತಾ ರವಿಶಂಕರ್, ಆಶಾ ಚಂದ್ರಪ್ಪ, ಆರತಿ ಆ.ಮ.ಪ್ರಕಾಶ್, ಯು.ಎಚ್.ವಿಶ್ವನಾಥ್, ಇ.ವಿಶ್ವಾಸ್ ಇದ್ದರು.