ಪ್ರತಿಭೆ ಹೊರತರಲು ಪ್ರತಿಭಾ ಕಾರಂಜಿ ಸೂಕ್ತ ವೇದಿಕೆ

31 smg 5
Published on

ಶಿವಮೊಗ್ಗ: ಶಾಲೆಗಳ ನಾಲ್ಕು ಗೋಡೆಗಳ ನಡುವೆ ಕಲಿಯುವ ಶಿಕ್ಷಣದ ಜತೆಗೆ ಹೊರ ಜಗತ್ತಿನ ಮಾಹಿತಿ ಮತ್ತು ಜ್ಞಾನವನ್ನು ತಿಳಿದುಕೊಳ್ಳುವುದು, ಅಂತರ್ಗತವಾಗಿರುವ ಪ್ರತಿಭೆಯನ್ನು ಹೊರ ತರಲು ಪ್ರತಿಭಾ ಕಾರಂಜಿ ಸೂಕ್ತ ವೇದಿಕೆ ಎಂದು ಎಂಎಲ್ಸಿ ಆಯನೂರು ಮಂಜುನಾಥ ಹೇಳಿದರು.

ನಗರದ ದುರ್ಗಿಗುಡಿ ಆಂಗ್ಲ ಮಾಧ್ಯಮ ಪ್ರೌಢಶಾಲಾ ಆವರಣದಲ್ಲಿ ತಾಲೂಕುಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಅಂಕಗಳ ಹಿಂದೆ ಬೀದ್ದಿರುವ ಶಿಕ್ಷಣದ ನಡುವೆ ಮಕ್ಕಳಲ್ಲಿರುವ ಪ್ರತಿಭೆ ಹೊರ ತರುವುದು ಸಾಧ್ಯವಾಗುತ್ತಿಲ್ಲ. ಹಾಗಾಗಿ ವಿದ್ಯಾರ್ಥಿಗಳ ಪ್ರತಿಭೆ ಹೊರತರುವ ಶಿಕ್ಷಣ ಇಲಾಖೆಯ ಪ್ರಯತ್ನ ಸಾರ್ಥಕವಾಗಿದೆ. ಇದರಲ್ಲಿ ಶಿಕ್ಷಕರ ಜತೆಗೆ ಪಾಲಕರ ಪಾತ್ರವೂ ದೊಡ್ಡದಿದೆ ಎಂದರು.

ಎಂಎಲ್ಸಿ ಎಸ್.ರುದ್ರೇಗೌಡ ಮಾತನಾಡಿ, ಮಕ್ಕಳ ಪ್ರತಿಭೆ ನೋಡಿ ಸಂತಸಪಡುವ ವೇದಿಕೆ ಇದಾಗಿದೆ. ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರ ತರುವ ಕೆಲಸವನ್ನು ಶಿಕ್ಷಣ ಇಲಾಖೆ ಮಾಡುತ್ತಿದೆ ಎಂದರು.

ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಮಾತನಾಡಿ, ಸರ್ಕಾರ ಕೊಡುವ ಅನುದಾನದಲ್ಲಿ ಪ್ರತಿಭಾ ಕಾರಂಜಿ ನಡೆಸಲು ಸಾಧ್ಯವಾಗುತ್ತಿಲ್ಲ. ತಾಲೂಕುಮಟ್ಟದ ಪ್ರತಿಭಾ ಕಾರಂಜಿ, ಕ್ರೀಡಾಕೂಟಗಳಿಗೆ ಕೇವಲ 20 ಸಾವಿರ ರೂ. ಕೊಡುತ್ತಾರೆ. ಇದು ಕೇವಲ ಆಮಂತ್ರಣ ಪತ್ರಿಕೆಗೆ ಸಾಕಾಗುವುದಿಲ್ಲ. ಮುಂದಿನ ವರ್ಷ ಸರ್ಕಾರ ಅನುದಾನ ಹೆಚ್ಚಿಗೆ ಬಿಡುಗಡೆ ಮಾಡದಿದ್ದರೆ ಯಾವುದೇ ಕ್ರೀಡಾಕೂಟ, ಪ್ರತಿಭಾ ಕಾರಂಜಿ ನಡೆಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಬಿಇಒ ಪಿ.ನಾಗರಾಜ್ ಮಾತನಾಡಿ, ಶಾಲಾ ಹಂತದಲ್ಲೇ 25 ವಿಭಿನ್ನವಾದ ಸ್ಪರ್ಧೆ ಆಯೋಜನೆ ಮಾಡಲಾಗಿದೆ. ಜಿಲ್ಲೆಯಲ್ಲಿ 628 ಶಾಲೆಗಳಿದ್ದು ಮಕ್ಕಳ ಹಬ್ಬವಾಗಿ ಆಚರಿಸುವುದು ಪ್ರತಿಭಾ ಕಾರಂಜಿಯ ಉದ್ದೇಶವಾಗಿದೆ ಎಂದರು.

ಮೇಯರ್ ಎಸ್.ಶಿವಕುಮಾರ್, ಡಿಡಿಪಿಐ ಸಿ.ಆರ್.ಪರಮೇಶ್ವರ ಮಾತನಾಡಿದರು. ಉಪಮೇಯರ್ ಲಕ್ಷ್ಮೀ ಶಂಕರನಾಯ್ಕ, ರಾಜ್ಯ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸಿ.ಎಸ್.ರಾಘವೇಂದ್ರ, ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಂ.ವೈ.ಧರ್ಮಪ್ಪ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎಂ.ರವಿ, ಕ್ಷೇತ್ರ ಸಮನ್ವಯಾಧಿಕಾರಿ ಶಿವಪ್ಪ ಸಂಗಣ್ಣವರ್, ದುರ್ಗಿಗುಡಿ ಸರ್ಕಾರಿ ಪ್ರಾಥಮಿಕ, ಹಿರಿಯ ಮತ್ತು ಪ್ರೌಢಶಾಲಾ ವಿಭಾಗದ ಎಸ್‌ಡಿಎಂಸಿ ಅಧ್ಯಕ್ಷರಾದ ವಿ.ರಾಘವೇಂದ್ರ, ನಾಗರಾಜ್ ಎಚ್. ಶೆಟ್ಟರ್, ರೇಷ್ಮಾ ಭಾನು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net