ಸಕಾಲದಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಿ: ಉಸ್ತುವಾರಿ ಕಾರ್ಯದರ್ಶಿ ಡಾ. ಸೆಲ್ವಕುಮಾರ್ ಸೂಚನೆ

IMG_6217
Published on

ಶಿವಮೊಗ್ಗ: ಜಿಲ್ಲೆಯಲ್ಲಿ ವಿವಿಧ ಇಲಾಖೆಯಡಿ ಈಗಾಗಲೇ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ನಿಗದಿಪಡಿಸಿದ ಕಾಲಮಿತಿಯಲ್ಲೇ ಪೂರ್ಣಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಎಸ್.ಸೆಲ್ವಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಪಂ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲೆಯಲ್ಲಿ ಮುಂಗಾರು, ಪ್ರವಾಹ, ವಿವಿಧ ಅಭಿವೃದ್ಧಿ ಕಾಮಗಾರಿಗಳು ಹಾಗೂ ಅನುಷ್ಠಾನದಲ್ಲಿರುವ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಇದುವರೆಗೂ ಬಿಡುಗಡೆ ಆಗಿರುವ ಅನುದಾನವನ್ನು ವ್ಯರ್ಥವಾಗದಂತೆ ಸಕಾಲದಲ್ಲಿ ಬಳಕೆ ಮಾಡಿ ನಿರೀಕ್ಷಿತ ಪ್ರಗತಿ ಸಾಧಿಸಬೇಕು ಎಂದು ತಾಕೀತು ಮಾಡಿದರು.

ಜಿಪಂ ವ್ಯಾಪ್ತಿಗೊಳಪಡುವ 24 ಇಲಾಖೆಗಳ 362.94 ಲಕ್ಷ ರೂ. ಮೊತ್ತದ ಕಾಮಗಾರಿಗಳು, ಪ್ರಸಕ್ತ ಸಾಲಿನ ಸಿಎಂ ಗ್ರಾಮೀಣ ಸಡಕ್ ಯೋಜನೆಯ 5.56 ಕೋಟಿ ರೂ. ವೆಚ್ಚದ 79 ಕಾಮಗಾರಿಗಳು, ಕೆರೆ ಅಭಿವೃದ್ಧಿ ಯೋಜನೆಯಡಿ 55 ಕೆರೆಗಳ ಅಭಿವೃದ್ಧಿಗೆ 3.57 ಕೋಟಿ ರೂ., ಜಿಪಂ ಶಾಸನಬದ್ಧ ಅನುದಾನದಡಿ 5.72 ಕೋಟಿ ರೂ. ವೆಚ್ಚದ 127 ಕಾಮಗಾರಿಗಳಿಗೆ ಸೆಲ್ವಕುಮಾರ್ ಅನುಮೋದನೆ ನೀಡಿದರು.

ಅಲ್ಲದೆ, ಸ್ಮಾರ್ಟ್‌ಸಿಟಿ, ಗ್ರಾಮೀಣ ರಸ್ತೆ, ಸಮಾಜ ಕಲ್ಯಾಣ ಇಲಾಖೆ, ಸಣ್ಣ ನೀರಾವರಿ ಇಲಾಖೆ ಕುರಿತು ಸಂಬಂಧಿತ ಇಲಾಖೆಗಳ ಅಧಿಕಾರಿಗಳಿಂದ ಇದುವರೆಗಿನ ಪ್ರಗತಿ ಬಗ್ಗೆ ಮಾಹಿತಿ ಪಡೆದರು.

ಡಿಸಿ ಕೆ.ಬಿ.ಶಿವಕುಮಾರ್ ಮಾತನಾಡಿ, ಕಳೆದ ಮಾಹೆಯಲ್ಲಿ ವಾಡಿಕೆಗಿಂತ ಶೇ.79ರಷ್ಟು ಹಾಗೂ ಕಳೆದ 24 ಗಂಟೆಯಲ್ಲಿ ಶೇ.461ರಷ್ಟು ಮಳೆ ಆಗಿದೆ. ಎಲ್ಲ ತಾಲೂಕುಗಳಲ್ಲಿ ನಿರಂತರವಾಗಿ ಬೀಳುತ್ತಿರುವ ಮಳೆಯಿಂದ ಜನ-ಜಾನುವಾರು ಜೀವಹಾನಿ ಆಗಬಹುದಾಗಿದ್ದು, ಅದರ ಮಾಹಿತಿ ಸಂಗ್ರಹಿಸಿ ತಕ್ಷಣದಲ್ಲಿ ವರದಿ ನೀಡಲು ತಹಸೀಲ್ದಾರ್‌ಗಳ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಜತೆಗೆ ಮನೆ ಬಿದ್ದಿರುವ, ಬೆಳೆ ಹಾನಿಗೊಳಗಾಗಿರುವ ಮಾಹಿತಿ ಸಂಗ್ರಹಿಸಲು ಸೂಚಿಸಲಾಗಿದೆ ಎಂದರು.

ಜಿಪಂ ಸಿಇಒ ಎಂ.ಎಲ್.ವೈಶಾಲಿ, ಎಸ್ಪಿ ಬಿ.ಎಂ.ಲಕ್ಷ್ಮೀಪ್ರಸಾದ್ ಸೇರಿ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಹಿರಿಯ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net