

ಶಿವಮೊಗ್ಗ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಬಗ್ಗೆ ಅವಹೇಳನಕಾರಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಎಡಿಜಿಪಿ ಚಂದ್ರಶೇಖರ್ ವಿರುದ್ಧ ಅ.3ರಂದು ಜಿಲ್ಲಾ ಕೇಂದ್ರ ಹಾಗೂ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ಏನು ಬೇಕಾದರೂ ಮಾತನಾಡಬಹುದು ಎಂದು ಭಾವಿಸಿರುವ ಚಂದ್ರಶೇಖರ್, ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಕುರಿತು ಪ್ರಸ್ತಾಪಿಸುವಾಗ ಹಂದಿಯನ್ನು ನಿದರ್ಶನವನ್ನಾಗಿ ನೀಡಿರುವುದು ಖಂಡನೀಯ ಎಂದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನಕುಮಾರ್ ಮಾತನಾಡಿ, ಎಡಿಜಿಪಿ ಚಂದ್ರಶೇಖರ್ ಭ್ರಷ್ಟ ಹಿನ್ನೆಲೆ ಹೊಂದಿದ್ದಾರೆ. ಅವರ ಪತ್ನಿ ಹೆಸರಿನಲ್ಲಿ 20 ಅಂತಸ್ತಿನ ಕಟ್ಟಡವಿದೆ. ರಾಜಕಾಲುವೆಯನ್ನೇ ಒತ್ತುವರಿ ಮಾಡಿ ಕಟ್ಟಡ ನಿರ್ಮಿಸಲಾಗಿದೆ. ಕೆರೆಗಳನ್ನೂ ಒತ್ತುವರಿ ಮಾಡಿಕೊಂಡಿದ್ದಾರೆ. ಭ್ರಷ್ಟಾಚಾರದ ಆರೋಪಗಳಿವೆ. ತಕ್ಷಣವೇ ಇವರನ್ನು ಸೇವೆಯಿಂದ ವಜಾ ಮಾಡಬೇಕೆಂದು ಆಗ್ರಹಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರಿಗಳು ಸಾರ್ವಜನಿಕ ಸೇವೆ ಮಾಡಬೇಕೇ ಹೊರತು ಯಾರನ್ನೋ ತೃಪ್ತಿಪಡಿಸಬಾರದು. ಎಚ್‌ಡಿಕೆ ಅವರನ್ನು ತೆಗಳಿದರೆ ಸಿಎಂ ಸಿದ್ದರಾಮಯ್ಯ ವಿಶ್ವಾಸಕ್ಕೆ ಪಾತ್ರವಾಗಬಹುದೆಂದು ಎಡಿಜಿಪಿ ಭಾವಿಸಿದಂತಿದೆ. ಸಿಎಂ ಕೂಡಲೇ ಆ ಅಧಿಕಾರಿಗೆ ಎಚ್ಚರಿಕೆ ನೀಡಬೇಕು. ಅವರ ಆಸ್ತಿಯ ಬಗ್ಗೆ ತನಿಖೆಗೆ ಆದೇಶಿಸಬೇಕೆಂದು ಒತ್ತಾಯಿಸಿದರು.
ಜೆಡಿಎಸ್ ನಗರಾಧ್ಯಕ್ಷ ದೀಪಕ್ ಸಿಂಗ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗೀತಾ ಸತೀಶ್, ಪಾಲಿಕೆ ಮಾಜಿ ಸದಸ್ಯ ಬೊಮ್ಮನಕಟ್ಟೆ ಮಂಜುನಾಥ್, ಪ್ರಮುಖರಾದ ಅಬ್ದುಲ್ ವಾಜಿದ್, ಜಯಣ್ಣ, ತ್ಯಾಗರಾಜ್, ಮಾಧವಮೂರ್ತಿ, ಸಂಜಯ್ ಕಶ್ಯಪ್, ಸಿದ್ದಪ್ಪ, ಸಿದ್ಧೇಶ್, ಗೋಪಿ, ಶಂಕರ್, ಚಂದ್ರಶೇಖರ್, ನರಸಿಂಹ ಗಂಧದಮನೆ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.