

ಶಿವಮೊಗ್ಗ: ಜಿಲ್ಲೆಯಲ್ಲಿ ಮುಂಗಾರು ಈ ಬಾರಿ ಸಂಪೂರ್ಣವಾಗಿ ಕೈಕೊಟ್ಟಿದೆ. ರೈತರು ಆತಂಕದಲ್ಲಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಎನ್‌ಡಿಆರ್‌ಎಫ್ ಮಾರ್ಗಸೂಚಿ ಅನ್ವಯ ಶಿವಮೊಗ್ಗ ಜಿಲ್ಲೆಯನ್ನು ಬರಪೀಡಿತವೆಂದು ಘೋಷಿಸುವಂತೆ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಒತ್ತಾಯಿಸಿದ್ದಾರೆ.
ಪೂರ್ವ ಮುಂಗಾರಿನಲ್ಲಿ ವಾಡಿಕೆಗಿಂತ 36 ಮಿಮೀ ಮಳೆ ಕಡಿಮೆಯಾಗಿತ್ತು. ಈಗ ಮುಂಗಾರಿನಲ್ಲಿ ಇದುವರೆಗೆ ವಾಡಿಕೆಗಿಂತ ಶೇ.40 ಕಡಿಮೆ ಮಳೆಯಾಗಿದೆ. ಬಿತ್ತನೆ ಮಾಡಿದ ಕೃಷಿ ಪ್ರದೇಶ ನೀರಿಲ್ಲದೇ ಒಣಗುತ್ತಿದೆ. ಹೀಗಾಗಿ ಜಿಲ್ಲೆಯನ್ನು ಬರಪೀಡಿತವೆಂದು ಘೋಷಿಸುವ ಮೂಲಕ ರೈತರ ನೆರವಿಗೆ ಸರ್ಕಾರ ಮುಂದಾಗಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಜಿಲ್ಲೆಯಲ್ಲಿ ಸುಮಾರು 77 ಸಾವಿರ ಹೆಕ್ಟೇರ್ ಭತ್ತ ಬಿತ್ತನೆ ಪ್ರದೇಶವಿದೆ. 50 ಸಾವಿರ ಹೆಕ್ಟೇರ್ ಮುಸುಕಿನ ಜೋಳ ಬೆಳೆಯುವ ಪ್ರದೇಶವಿದೆ. ಈ ಪೈಕಿ 52 ಸಾವಿರ ಹೆಕ್ಟೇರ್‌ನಲ್ಲಿ ಭತ್ತ ಹಾಗೂ 44 ಸಾವಿರ ಹೆಕ್ಟೇರ್‌ನಲ್ಲಿ ಮುಸುಕಿನ ಜೋಳದ ಬಿತ್ತನೆಯಾಗಿದೆ. ಆದರೆ ಈಗ ಇದೂ ನೀರಿಲ್ಲದೇ ಒಣಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ಬಾರಿ ಜಿಲ್ಲೆಯಲ್ಲಿ ಬೆಳೆ ವಿಮೆಗೆ ನೋಂದಣಿ ಮಾಡಿಕೊಂಡ ರೈತರ ಸಂಖ್ಯೆ ಕಡಿಮೆಯಾಗಿದೆ. ಆದರೂ ಈಗಾಗಲೇ ಬಿತ್ತನೆ ಮಾಡಿರುವ ಸಾವಿರಾರು ರೈತರು ವಿಮೆ ಮಾಡಿಸಿದ್ದಾರೆ. ಜಿಲ್ಲಾಡಳಿತ ಕೂಡಲೆ ಸಮೀಕ್ಷೆ ನಡೆಸಿ ಬಿತ್ತನೆ ಮಾಡಿ ನಷ್ಟ ಅನುಭವಿಸಿರುವ ರೈತರಿಗೆ ಮಧ್ಯಂತರ ಪರಿಹಾರ ನೀಡಬೇಕು. ಸರ್ಕಾರ ಈ ಹಂತದಲ್ಲೇ ರೈತರ ನೆರವಿಗೆ ಧಾವಿಸಿದರೆ ಮುಂದೆ ಉಂಟಾಗಬಹುದಾದ ಅನಾಹುತವನ್ನು ತಪ್ಪಿಸಬಹುದು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಸೂಕ್ತ ಯೋಜನೆ ರೂಪಿಸಬೇಕಿದೆ ಎಂದರು.
ಶಾಸಕ ಆರಗ ಜ್ಞಾನೇಂದ್ರ, ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ವಿಭಾಗೀಯ ಪ್ರಭಾರಿ ಗಿರೀಶ್ ಪಟೇಲ್, ಪ್ರಮುಖರಾದ ಕೆ.ವಿ.ಅಣ್ಣಪ್ಪ, ಶಿವರಾಜ್, ಚಂದ್ರಶೇಖರ್ ಇದ್ದರು.