

ಶಿವಮೊಗ್ಗ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಬಗ್ಗೆ ಕೀಳುಮಟ್ಟದ ಭಾಷೆ ಬಳಸಿ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಗುರುವಾರ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ಪಕ್ಷದ ಕಚೇರಿಯಿಂದ ಪ್ರತಿಭಟನಾ ಮೆರವಣಿಗೆ ಹೊರಟು ಮಹಾವೀರ ವೃತ್ತದಲ್ಲಿ ಸಿ.ಟಿ.ರವಿ ಅವರ ಭಾವಚಿತ್ರ ದಹಿಸಿ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು, ಸಿದ್ದರಾಮಯ್ಯ ಅವರು 5 ವರ್ಷ ಸಿಎಂ ಆಗಿದ್ದಾಗ ಒಂದೇ ಒಂದು ಭ್ರಷ್ಟಾಚಾರ ನಡೆಸಿಲ್ಲ. ಇಂತಹವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಸಿ.ಟಿ.ರವಿ ಅವರು ಸಿದ್ದರಾಮಯ್ಯ ಅವರ ಕಾಲಿಗೆ ಬಿದ್ದು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಮಾತನಾಡಿ, ಪಕ್ಷದ ಹಿರಿಯ ನಾಯಕ ಸಿದ್ದರಾಮಯ್ಯ ಅವರ ಬಗ್ಗೆ ನಾಲಿಗೆ ಹರಿಬಿಟ್ಟಿರುವ ಸಿ.ಟಿ.ರವಿ ರಾಜ್ಯದ ಜನತೆಯ ಕ್ಷಮೆ ಕೇಳಬೇಕು. ಸಿ.ಟಿ.ರವಿ ಅವರಿಗೆ ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ ಎಂದರು.
ಬಿಜೆಪಿಯ ಕೆಲವು ಶಾಸಕರು ಹಿಂದೆ ಟೀ ಕುಡಿಯಲು ಸಹ ಹಣವಿರುತ್ತಿರಲಿಲ್ಲ. ಈಗ ಕೋಟ್ಯಂತರ ರೂ. ಆಸ್ತಿ ಮಾಡಿದ್ದಾರೆ. ಬಿಜೆಪಿ ಸರ್ಕಾರ ಎಲ್ಲ ಇಲಾಖೆಯ ಕಾಮಗಾರಿಗಳಲ್ಲಿ ಶೇ.40ರಷ್ಟು ಲಂಚ ಪಡೆಯುತ್ತಿದೆ ಎಂದು ದೂರಿದರು. ಪ್ರಮುಖರಾದ ಎಸ್.ಪಿ.ಶೇಷಾದ್ರಿ, ಎಸ್ಸಿ ಎಸ್ಟಿ ಘಟಕದ ಜಿಲ್ಲಾಧ್ಯಕ್ಷ ಕೃಷ್ಣಪ್ಪ, ಇಕ್ಕೇರಿ ರಮೇಶ್, ಚಂದ್ರಶೇಖರ್, ಪ್ರವೀಣ್‌ಕುಮಾರ್, ಕೆ.ರಂಗನಾಥ್, ಜಿ.ಡಿ.ಮಂಜುನಾಥ್, ಸಿ.ಎಸ್.ಚಂದ್ರಭೂಪಾಲ್, ಎನ್.ರವಿಕುಮಾರ್, ಚಂದನ್, ವಿಜಯಲಕ್ಷ್ಮೀಪಾಟೀಲ್, ಸ್ಟೆಲ್ಲಾ ಮಾರ್ಟಿನ್, ಸೌಂಗಧಿಕಾ ಪ್ರತಿಭಟನೆಯಲ್ಲಿದ್ದರು.