

ಶಿವಮೊಗ್ಗ: ಉಗ್ರರಿಗೆ ಬೆಂಬಲ ಕೊಡುವುದನ್ನು ಮುಂದುವರಿಸಿದರೆ ಭವಿಷ್ಯದಲ್ಲಿ ಜನರೇ ಕಾಂಗ್ರೆಸ್‌ನ್ನು ಬ್ಯಾನ್ ಮಾಡುತ್ತಾರೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಎಚ್ಚರಿಕೆ ನೀಡಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹಿಂದಿನಿಂದಲೂ ಅಲ್ಪಸಂಖ್ಯಾತರನ್ನು ತುಷ್ಟೀಕರಣ ಮಾಡುತ್ತಿದೆ. ಗಲಭೆಗಳಾದಾಗ ಭಯೋತ್ಪಾದಕರು ಮತ್ತು ಉಗ್ರಚಟುವಟಿಕೆಗಳನ್ನು ನಡೆಸುವವರ ಪರವಾಗಿ ಹೇಳಿಕೆ ನೀಡುತ್ತಾ ಬಂದಿದೆ ಎಂದು ದೂರಿದರು.
ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಸಾಕ್ಷಿ ಸಮೇತ ಸಿಕ್ಕಿದ ಉಗ್ರನನ್ನು ಕಾಂಗ್ರೆಸ್ ಬೆಂಬಲಿಸುವ ಹೇಳಿಕೆ ನೀಡಿದೆ. ಕಾಶ್ಮೀರ ಭಯೋತ್ಪಾದಕರು ಮತ್ತು ಬಾಂಬೆಯಲ್ಲಿ ಸ್ಫೋಟ ನಡೆದಾಗಲೂ ಕಾಂಗ್ರೆಸ್ ಉಗ್ರರ ಪರ ಹೇಳಿಕೆ ನೀಡಿತ್ತು. ಪಿಎಫ್‌ಐ ಮತ್ತು ಎಸ್‌ಡಿಪಿಐ ಬ್ಯಾನ್ ಮಾಡಬೇಕೆಂಬ ಒತ್ತಾಯ ಹೆಚ್ಚಿದಾಗ ಕೂಡ ಕಾಂಗ್ರೆಸ್ ನಿರಂತರವಾಗಿ ದೇಶದ್ರೋಹಿ ಚಟುವಟಿಕೆಯಲ್ಲಿ ಭಾಗವಹಿಸಿದ್ದವರ ಪರವಾಗಿಯೇ ಹೇಳಿಕೆ ನೀಡುತ್ತಾ ಬಂದಿದೆ. ನ್ಯಾಯಾಲಯ ಕೂಡ ಪಿಎಫ್‌ಐ ಬ್ಯಾನ್ ಮಾಡಿದ್ದು ಸರಿಯಿದೆ ಎಂದು ಹೇಳಿದಾಗಲೂ ಕಾಂಗ್ರೆಸ್ ಪಿಎಫ್‌ಐ ಪರ ಬ್ಯಾಟಿಂಗ್ ಮಾಡುತ್ತಾ ಬಂದಿದೆ. ಇನ್ನಾದರೂ ಕಾಂಗ್ರೆಸ್ ಎಚ್ಚೆತ್ತು ದೇಶದ್ರೋಹಿಗಳ ಪರ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕಿದೆ ಎಂದು ಸಲಹೆ ನೀಡಿದರು.