

ಶಿವಮೊಗ್ಗ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ. ಈ ಎಲ್ಲದರ ನಡುವೆ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಇನ್ನೂ ಟೇಕಾಫ್ ಆಗಿಲ್ಲ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್ ವ್ಯಂಗ್ಯವಾಡಿದ್ದಾರೆ
ಸಿಎಂ ಬಸವರಾಜ ಬೊಮ್ಮಾಯಿ ಬ್ಯಾಂಕ್ ಗುಮಾಸ್ತರಂತಾಗಿದ್ದಾರೆ. ಅವರು ಅಧಿಕಾರಯುತವಾಗಿ ವರ್ತಿಸುತ್ತಿಲ್ಲ. ಮಹಿಳೆಯರು ಹಾಗೂ ಬಾಲಕಿಯರಿಗೆ ರಾಜ್ಯದಲ್ಲಿ ರಕ್ಷಣೆ ಇಲ್ಲದಂತಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಸಾರ್ವಜನಿಕ ಸ್ಥಳದಲ್ಲಿರುವ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸುವಂತೆ 2009ರಲ್ಲಿ ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಆಗ ಕೇಂದ್ರದಲ್ಲಿದ್ದ ಯುಪಿಎ ಸರ್ಕಾರವಾಗಲಿ, ಬಳಿಕ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವಾಗಲಿ ಧಾರ್ಮಿಕ ಕಟ್ಟಡಗಳ ತೆರವಿಗೆ ಮುಂದಾಗಲಿಲ್ಲ. ಈಗ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಮೈಸೂರು ಜಿಲ್ಲೆಯಲ್ಲಿ ಒಂದು ದೇವಾಲಯ ತೆರವು ಮಾಡಿರುವುದು ಆ ಪಕ್ಷದ ದ್ವಂದ್ವ ನಿಲುವಿಗೆ ಸಾಕ್ಷಿ. ಇವರ ಅವಧಿಯಲ್ಲೇ ದೇವಾಲಯ ನೆಲಸಮವಾಗುತ್ತದೆ. ಅದರ ವಿರುದ್ಧ ಇವರೇ ಪ್ರತಿಭಟನೆ ನಡೆಸುತ್ತಾರೆ. ದೇವರ ಹೆಸರು ಹೇಳಿಕೊಂಡು ಅಧಿಕಾರ ಮಾಡುತ್ತಿರುವ ಬಿಜೆಪಿಯವರು ದೇವಾಲಯಗಳ ಒಡೆಯುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ದೂರಿದರು.
ಸೇವಾದಳ ಜಿಲ್ಲಾಧ್ಯಕ್ಷ ವೈ.ಎಚ್.ನಾಗರಾಜ್, ಕೆಪಿಸಿಸಿ ಸಾಮಾಜಿಕ ಜಾಲತಾಣ ಕಾರ್ಯದರ್ಶಿ ಸೌಗಂಧಿಕಾ, ಪಾಲಿಕೆ ಪ್ರತಿಪಕ್ಷ ನಾಯಕಿ ಯಮುನಾ ರಂಗೇಗೌಡ, ಪ್ರಮುಖರಾದ ಚಂದ್ರಭೂಪಾಲ, ಚಂದನ್, ಎನ್.ಡಿ. ಪ್ರವೀಣ್, ಚಂದ್ರು, ಸಂಜಯ್ ಕಶ್ಯಪ್, ಆಕಾಶ್, ರಂಗೇಗೌಡ, ಪ್ರವೀಣ್ ಇತರರಿದ್ದರು.