ಪದಬಳಕೆ ಬಗ್ಗೆ ಇರಲಿ ಎಚ್ಚರ: ಸಚಿವ ಈಶ್ವರಪ್ಪ

Eshwarappa K. S (1)
Published on

ಶಿವಮೊಗ್ಗ: ರಾಜಕಾರಣಿಗಳು ಜನರ ಪ್ರತಿನಿಧಿಗಳೆಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಇದಕ್ಕೆ ನಾನೂ ಹೊರತಲ್ಲ. ಜನರ ಮುಂದೆ ನಾವು ದಿನದಿಂದ ದಿನಕ್ಕೆ ಸಣ್ಣವರಾಗುತ್ತಿದ್ದೇವೆ. ಉಪಚುನಾವಣೆ ಕಣದಲ್ಲಿ ವೈಯಕ್ತಿಕ ಟೀಕೆ-ಟಿಪ್ಪಣಿಗಳು, ಅಶ್ಲೀಲ ಪದಗಳ ಬಳಕೆಯಿಂದ ನಾನು ಬಹಳ ನೊಂದಿದ್ದೇನೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಚುನಾವಣೆ ಇರಲಿ, ಬಿಡಲಿ ರಾಜಕಾರಣದಲ್ಲಿ ಅಶ್ಲೀಲ ಪದ ಬಳಕೆ ನಿಲ್ಲಬೇಕು. ನಾನೂ ಸೇರಿದಂತೆ ಎಲ್ಲರೂ ಈ ಬಗ್ಗೆ ನಿಶ್ಚಯ ಮಾಡಬೇಕು ಎಂದರು. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರದ ವಿರುದ್ಧ ಆರೋಪ ಮಾಡಲು ಕಾಂಗ್ರೆಸ್‌ನವರಿಗೆ ಬೇರೆ ವಿಷಯಗಳೇ ಇಲ್ಲ. ಹೀಗಾಗಿ ಸಚಿವರು ಚೀಲದಲ್ಲಿ ಹಣ ತಂದು ಹಂಚಿಕೆ ಮಾಡುತ್ತಿದ್ದಾರೆ ಎಂದು ದೂರುತ್ತಿದ್ದಾರೆ. ಚುನಾವಣೆ ಸೋಲಿನ ಭೀತಿಯೇ ಈ ಆರೋಪಕ್ಕೆ ಕಾರಣ ಎಂದು ತಿರುಗೇಟು ನೀಡಿದರು.

ಹಾನಗಲ್ ಹಾಗೂ ಸಿಂಧಗಿ ಎರಡೂ ಕ್ಷೇತ್ರಗಳಲ್ಲಿ ನಾನು ಪ್ರಚಾರ ನಡೆಸಿದ್ದೇನೆ. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿಗೆ ಅಭೂತಪೂರ್ವ ಬೆಂಬಲ ದೊರೆತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳು ನಮ್ಮ ಅಭ್ಯರ್ಥಿ ಗೆಲುವಿಗೆ ಸಹಕಾರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net