ಶಿವಮೊಗ್ಗದಲ್ಲಿ ಭಯದ ವಾತಾವರಣ ಸೃಷ್ಟಿಗೆ ಬಜರಂಗದಳದ ಕಾರ್ಯಕರ್ತ ಹರ್ಷನ ಹತ್ಯೆ

22 smg Harsha (1)(1)
Published on

ಶಿವಮೊಗ್ಗ: ಬಜರಂಗದಳದ ಕಾರ್ಯಕರ್ತ ಹರ್ಷನ ಹತ್ಯೆ ಸಂಚು ಬಹಿರಂಗಗೊಂಡಿದ್ದು ಕ್ಲಾರ್ಕ್‌ಪೇಟೆಯ 22 ವರ್ಷದ ರಿಹಾನ್ ಷರೀಫ್ ಹತ್ಯೆಗೆ ಸಂಚು ರೂಪಿಸಿದ್ದ ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಕಳೆದ ಫೆಬ್ರವರಿ 20ರಂದು ರಾತ್ರಿ ಭಾರತಿ ಕಾಲನಿಯಲ್ಲಿ ಸೀಗೆಹಟ್ಟಿಯ ಹರ್ಷನ ಬರ್ಬರ ಹತ್ಯೆ ನಡೆದಿತ್ತು. ಹತ್ಯೆಯಲ್ಲಿ 10 ಮಂದಿ ಭಾಗಿಯಾಗಿದ್ದು ಪೊಲೀಸರು ಎಲ್ಲರನ್ನೂ ಬಂಧಿಸಿದ್ದರು. ಅದಾದ ಬಳಿಕ ಯುಎಪಿಎ ಅಡಿ ಪ್ರಕರಣವನ್ನು ಎನ್‌ಐಎ (ರಾಷ್ಟ್ರೀಯ ತನಿಖಾದಳ)ಗೆ ವರ್ಗಾವಣೆ ಮಾಡಿತ್ತು. ಆರೋಪಿಗಳನ್ನು ಬೆಂಗಳೂರು, ಬಳ್ಳಾರಿ ಮತ್ತು ಮೈಸೂರು ಸೇರಿದಂತೆ ವಿವಿಧೆಡೆ ಇರಿಸಿದ್ದು ತನಿಖೆ ಇನ್ನೂ ಮುಂದುವರಿದಿದೆ. ಈ ನಡುವೆ ತನಿಖೆ ಕೈಗೊಂಡು ಹರ್ಷನ ಹತ್ಯೆಗೆ ಸಂಚು ರೂಪಿಸಿದ್ದು ಯಾರು? ಎಷ್ಟು ದಿನದಿಂದ ತಯಾರಿ ನಡೆಸಿದ್ದರು? ಮಾರಕಾಸ್ತ್ರಗಳನ್ನು ಎಲ್ಲಿ ಖರೀದಿಸಿದ್ದರು? ಕೊಲೆಗೂ ಮುನ್ನ ಏನೆಲ್ಲ ಮಾಡಿದ್ದರು? ಎಂಬುದನ್ನು ಇದೀಗ ತನಿಖಾಧಿಕಾರಿಗಳು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ರಿಹಾನ್ ಷರೀಫ್ ಬಟ್ಟೆ ವ್ಯಾಪಾರದ ಜತೆಗೆ ಅಪರಾಧ ಕೃತ್ಯಗಳಲ್ಲೂ ಭಾಗಿಯಾಗಿದ್ದ. ಫೆಬ್ರವರಿ 16ರಂದು ಹರ್ಷ ಹತ್ಯೆ ಬಗ್ಗೆ ಶಿವಮೊಗ್ಗ ಎನ್‌ಟಿ ರಸ್ತೆಯಲ್ಲಿ ಜಿಲಾನ್, ಆಸೀಫ್, ನಿಹಾಲ್, ಅಫ್ವಾನ್, ಖಾಸಿಫ್ ಜತೆ ಚರ್ಚೆ ನಡೆಸಿದ್ದ. ಶಿವಮೊಗ್ಗದಲ್ಲಿ ಭಯದ ವಾತಾವರಣ ಸೃಷ್ಟಿಸಲು ಹತ್ಯೆ ಮಾಡಬೇಕೆಂದು ನಿರ್ಧರಿಸಿದ್ದರು. ಈ ವೇಳೆ ಯಾರನ್ನು ಹತ್ಯೆ ನಡೆಸಬೇಕೆಂಬ ವಿಚಾರ ಬಂದಾಗ ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಮರ ವಿರುದ್ಧ ಪೋಸ್ಟ್ ಹಾಕಿದ್ದ ಹರ್ಷನನ್ನೇ ಹತ್ಯೆ ಮಾಡಲು ತೀರ್ಮಾನಿಸಿದ್ದರು.

ಪ್ರತಿದಿನ ಹಿಂಬಾಲಿಸಿದ್ದ ಆರೋಪಿಗಳು:

ಹರ್ಷ ಹತ್ಯೆಗೆ ಸಂಚು ರೂಪಿಸಿದ ಬಳಿಕ ಆರೋಪಿಗಳು ಆತನನ್ನು ಪ್ರತಿದಿನ ಹಿಂಬಾಲಿಸಿದ್ದರು. ಹರ್ಷನಿಗೆ ಆರೋಪಿಗಳ ಮುಖ ಪರಿಚಯ ಇದ್ದ ಕಾರಣ ಜಿಲಾನ್‌ನ ಸ್ನೇಹಿತ ಫರಾಜ್ ಪಾಷಾನನ್ನು ನಿಯೋಜಿಸಿದ್ದರು. ಫೆ.16ರಿಂದ ಹರ್ಷ ಹತ್ಯೆಯಾಗುವವರೆಗೂ ಫರಾಜ್ ಹಿಂಬಾಲಿಸಿದ್ದ. ಭದ್ರಾವತಿಯಲ್ಲಿ ಮೂರು ಲಾಂಗ್ ಖರೀದಿಸಿದ್ದರು. ಹತ್ಯೆ ಬಳಿಕ ಪರಾರಿಯಾಗಲು ಶಿವಮೊಗ್ಗ ಬೈಪಾಸ್ ರಸ್ತೆಯಲ್ಲಿ ಕಾರಿಗೆ ಪೆಟ್ರೋಲ್ ತುಂಬಿಸಿಕೊಂಡಿದ್ದರು.

23 ಕಡೆ ಲಾಂಗ್, ಡ್ರಾೃಗರ್‌ನಿಂದ ಹಲ್ಲೆ:

ಹರ್ಷ ಸ್ನೇಹಿತರೊಂದಿಗೆ ಸೀಗೆಹಟ್ಟಿ ಸರ್ಕಲ್ಗೆ ಬರುತಿದ್ದಂತೆ ಫರಾಜ್ ಹಂತಕರಿಗೆ ಮಾಹಿತಿ ನೀಡಿದ್ದ. ಕೂಡಲೆ ಬಂದ ಆರೋಪಿಗಳು ಭಾರತಿ ಕಾಲನಿಯಲ್ಲಿ ಹರ್ಷನ ಮೇಲೆ ದಾಳಿ ಮಾಡಿದ್ದರು. ರಿಹಾನ್ ಮತ್ತು ಅಫ್ವಾನ್ ಹರ್ಷನನ್ನು ಅಟ್ಟಿಸಿಕೊಂಡು ಬಂದಿದ್ದರೆ ಭಾರತಿ ಕಾಲನಿ 2ನೇ ಕ್ರಾಸ್ ಬಳಿ ಇದ್ದ ಖಾಸಿಫ್ ಡ್ರ್ಯಾಗರ್‌ನಲ್ಲಿ ಚುಚ್ಚಿದ್ದ. ಗಂಭೀರವಾಗಿ ಗಾಯಗೊಂಡರೂ ಓಡುತ್ತಿದ್ದ ಹರ್ಷನ ಮೇಲೆ ಅಟ್ಟಿಸಿಕೊಂಡು ಬರುತ್ತಿದ್ದ ಮೂವರೂ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದರು. ಹರ್ಷನ ದೇಹದ ಮೇಲೆ 23 ಕಡೆ ಲಾಂಗ್ ಹಾಗೂ ಡ್ರಾೃಗರ್ ಮೂಲಕ ಹಲ್ಲೆ ನಡೆಸಿ ಕಾರಿನಲ್ಲಿ ಪರಾರಿಯಾಗಿದ್ದರು.

ರಕ್ತದ ಮಡುವಿನಲ್ಲಿದ್ದ ಹರ್ಷನ ಜತೆ ಸೆಲ್ಫಿ:

ಹರ್ಷ ರಕ್ತದ ಮಡುವಿನಲ್ಲಿ ಬೀಳುತ್ತಿದ್ದಂತೆ ಹರ್ಷನ ರಕ್ತಸಿಕ್ತ ದೇಹದೊಂದಿಗೆ ಹಂತಕರು ಸೆಲ್ಫಿ ತೆಗೆದುಕೊಂಡು ಖುಷಿ ಪಟ್ಟಿದ್ದರು. ಹರ್ಷ ಹತ್ಯೆ ವೇಳೆ ಹಂತಕರ ಬಟ್ಟೆಗೂ ರಕ್ತ ತಗುಲಿತ್ತು. ಆರೋಪಿಗಳ ಬಟ್ಟೆ ಬದಲಾಯಿಸಲು ಸೈಯದ್ ನದೀಂ ನೆರವಾಗಿದ್ದ. ಎಲ್ಲ ಹಂತಕರಿಗೂ ಹೊಸ ಬಟ್ಟೆ ನೀಡಿ ಅವರ ರಕ್ತಸಿಕ್ತ ಬಟ್ಟೆಯಲ್ಲಿ ಲಾಂಗ್‌ಗಳನ್ನು ಸುತ್ತಿ ತುಂಗಾನದಿ ತೀರದ ಪೊದೆಯಲ್ಲಿಟ್ಟಿದ್ದರು.

ಕೊಲೆ ಬಳಿಕ ಘೋಷಣೆ ಕೂಗಿದ್ದ ಹಂತಕರು:

ಹರ್ಷನ ಕೊಲೆ ಮಾಡುವಾಗ ಆರೋಪಿಗಳು ಖಾಫೀರ್ ಭಜರಂಗ್ ದಳ್ ವಾಲೊಂಕೋ ಮಾರೋ... ಎಂದು ಘೋಷಣೆ ಕೂಗಿದ್ದರು. ಬಂಧಿತ ಆರೋಪಿಗಳ ಮೊಬೈಲ್ ಪರಿಶೀಲನೆ ನಡೆಸಿದಾಗ ಹತ್ಯೆಯಾದ ಹರ್ಷ ಫೋಟೋಗಳು ಸಿಕ್ಕಿದ್ದವು. ಜತೆಗೆ ಒಸಮಾ ಬಿನ್ ಲಾಡೆನ್ ಫೋಟೋ ಕೂಡ ಪತ್ತೆಯಾಗಿತ್ತು. ಬಂಧಿತರಲ್ಲಿ ಮೊಹಮ್ಮದ್ ಖಾಸಿಫ್ ಪಿಎಫ್‌ಐ ಮತ್ತು ಎಸ್‌ಡಿಪಿಐ ಸಂಪರ್ಕ ಹೊಂದಿದ್ದ ಎಂಬುದೂ ಬಯಲಾಗಿದೆ.

ಹರ್ಷನ ಹತ್ಯೆ ಯಾಕೆ? :

ಶಿವಮೊಗ್ಗದಲ್ಲಿ ಭಯ ಹುಟ್ಟಿಸಲು ನಡೀತು ಹರ್ಷ ಹತ್ಯೆ ಮಾಡಿರುವುದು ಸಾಬೀತಾಗಿದೆ. ಬಜರಂಗದಳದವರು ಅಕ್ರಮವಾಗಿ ಗೋವು ಸಾಗಿಸುತ್ತಿದ್ದ ವಾಹನ ತಡೆದಿದ್ದರು. ಕಸಾಯಿಖಾನೆಗೆ ಹೋಗುತ್ತಿದ್ದ ಗೂಡ್ಸ್ ವಾಹನ ಅಡ್ಡಗಟ್ಟಿ ಗೋರಕ್ಷಣೆ ಮಾಡುತ್ತ ಮುಸ್ಲಿಮರ ಆದಾಯಕ್ಕೆ ತೊಂದರೆ ಮಾಡುತ್ತಿದ್ದಾರೆ. ಹಾಗಾಗಿ ಸಾರ್ವಜನಿಕ ಸ್ಥಳದಲ್ಲಿ ಓರ್ವ ಹಿಂದುವಿನ ಹತ್ಯೆ ಮಾಡಬೇಕೆಂದು ನಿರ್ಧರಿಸಿ ಹರ್ಷನನ್ನು ಟಾರ್ಗೆಟ್ ಮಾಡಿದ್ದರು.

ಹತ್ಯೆ ಆರೋಪಿಗಳು: ಮಹಮ್ಮದ್ ಖಾಸಿಫ್, ಸೈಯ್ಯದ್ ನದೀಂ, ರಿಹಾನ್ ಷರೀಫ್, ಉಲ್ಲಾಖಾನ್, ಅಬ್ದುಲ್ ಅಫನ್, ನಿಹಾನ್, ಅಬ್ದುಲ್ ಅಫನ್, ಅಬ್ದುಲ್ ಖಾದರ್ ಜಿಲಾನ್, ಫರಾಜ್ ಪಾಷಾ, ಅಬ್ದುಲ್ ರೋಷನ್ ಮತ್ತು ಜಾಫರ್ ಸಾದಿಕ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net