

ಹೊಸನಗರ: ಬೆಳ್ತಂಗಡಿ ತಾಲೂಕಿನ ಗುರುವಾಯಿನಕೆರೆ ಮನೆ ಎದುರು ನಿಲ್ಲಿಸಿದ್ದ ಲಾರಿಯೊಂದನ್ನು ಅಪಹರಣ ಮಾಡಿದ್ದ ಆರೋಪಿಗಳನ್ನು ಲಾರಿ ಸಮೇತ ನಗರ ಪೊಲೀಸರು ಪತ್ತೆ ಹಚ್ಚಿ ಗುರುವಾರ ರಾತ್ರಿ ಬಂಧಿಸಿದ್ದಾರೆ.
ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಗುರುವಾಯನಕೆರೆ ಇಬ್ರಾಹಿಂಗೆ ಸೇರಿದ ಲಾರಿಯನ್ನು ಗುರುವಾರ ಬೆಳ್ಳಂಬೆಳಗ್ಗೆ ಅಪಹರಣ ಮಾಡಲಾಗಿತ್ತು. ಠಾಣೆಗೆ ದೂರು ಬರುತ್ತಿದ್ದಂತೆ ಸಿಪಿಐ ಸಂದೇಶ್ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆಗೆ ಇಳಿದಿತ್ತು. ಅಪಹರಣ ಮಾಹಿತಿ ಹೊಸನಗರ ತಾಲೂಕಿನ ನಗರ ಠಾಣೆಗೆ ಬರುತ್ತಿದ್ದಂತೆ ಪಿಎಸ್ಐ ಶಿವರಾಜ್ ನೇತೃತ್ವದಲ್ಲಿ ಪೊಲೀಸರು ತಪಾಸಣೆಗಿಳಿದಿದ್ದರು. ರಾತ್ರಿ 11 ಗಂಟೆ ಅಂದಾಜಿಗೆ ಆರೋಪಿಗಳ ಸಮೇತ ಅಪಹರಣಕ್ಕೊಳಗಾದ ಲಾರಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಶಿವಮೊಗ್ಗ ಟಿಪ್ಪುನಗರದ ಅಸ್ಲಾಂ (60), ಅಫ್ರೋಜ್ ಪಾಷಾ (54) ಎಂಬುವವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. ಇಬ್ರಾಹಿಂ ಅವರ ಲಾರಿಯನ್ನು ಮನೆ ಮುಂಭಾಗದಲ್ಲಿ ಬ್ಯಾಟರಿ ತೆಗೆದು ನಿಲ್ಲಿಸಲಾಗಿತ್ತು. ಆದರೆ ಆರೋಪಿಗಳು ಬ್ಯಾಟರಿ ಕನೆಕ್ಟ್ ಮಾಡಿಕೊಂಡು ಅಪಹರಿಸಿದ್ದಾರೆ. ಉಡುಪಿ-ಸಿದ್ದಾಪುರ ಮಾರ್ಗವಾಗಿ 150 ಕಿಮೀ ದೂರ ಅಪಹರಿಸಿಕೊಂಡು ಬರಲಾಗಿತ್ತು. ಲಾರಿಯ ಸುಳಿವು ಸಿಗದಂತೆ ಆರೋಪಿಗಳು ಲಾರಿಯ ನಂಬರ್ ಪ್ಲೇಟ್ ಮೇಲೆ ಬೇರೆ ನಂಬರ್ ಸ್ಟಿಕ್ಕರ್ ಅಂಟಿಸಲಾಗಿತ್ತು. ಅಪಹರಣ ಮಾಡಿದ ಲಾರಿಯನ್ನು ಶಿವಮೊಗ್ಗಕ್ಕೆ ತೆಗೆದುಕೊಂಡು ಹೋಗಲಾಗುತ್ತಿತ್ತು ಎಂದು ತಿಳಿದು ಬಂದಿದೆ. ವಿಚಾರಣೆ ಬಳಿಕ ಬೆಳ್ತಂಗಡಿ ಠಾಣೆಯಿಂದ ದೂರುದಾರರ ಸಮೇತ ಬಂದ ಪೊಲೀಸರಿಗೆ ಲಾರಿ ಸಹಿತ ಆರೋಪಿಗಳ ಹಸ್ತಾಂತರ ಮಾಡಿದರು.
ಕಾರ್ಯಾಚರಣೆಯಲ್ಲಿ ಎಎಸ್ಐ ಪಾಟೀಲ್, ಹೆಡ್ ಕಾನ್ಸ್ಟೇಬಲ್ ಜಿ.ವೆಂಕಟೇಶ್, ಗಂಗಪ್ಪ ಬಟೋಳಿ, ರಮೇಶ್, ಕಾಕಾ ಇತರರು ಪಾಲ್ಗೊಂಡಿದ್ದರು.