

ಪಾಂಡವಪುರ: ಅನಾರೋಗ್ಯಕ್ಕೀಡಾಗಿರುವ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಪತ್ನಿ ಶಿಲ್ಪಾ ದರ್ಶನ್ ಅವರ ಆರೋಗ್ಯ ಸುಧಾರಣೆಗಾಗಿ ತಾಲೂಕಿನ ಡಾಮಡಹಳ್ಳಿಯ ರೈತಸಂಘ ಕಾರ್ಯಕರ್ತರು ಗ್ರಾಮದ ಚಂದ್ರವೌಳೇಶ್ವರ ದೇವಸ್ಥಾನದಲ್ಲಿ ಸೋಮವಾರ ಮೃತ್ಯುಂಜಯ ಹೋಮ ನೆರವೇರಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಅರ್ಚಕರಾದ ನಾಗೇಂದ್ರ ಮತ್ತು ವೇಣು ಅವರ ತಂಡ ಬೆಳಗ್ಗೆ 9 ಗಂಟೆಗೆ ಪೂಜಾ ಕೈಂಕರ್ಯಗಳನ್ನು ಕೈಗೊಂಡರು. ಆ ಬಳಿಕ ಶಿಲ್ಪಾ ಅವರ ಹೆಸರಿನಲ್ಲಿ ಮೃತ್ಯುಂಜಯ ಹೋಮ ನೆರವೇರಿಸಿ ಪೂರ್ಣಾಹುತಿ ಸಲ್ಲಿಸಿದ ನಂತರ ದೇವರಿಗೆ ಮಹಾಮಂಗಳಾರತಿ ನೆರವೇರಿಸಲಾಯಿತು. ದರ್ಶನ್ ಪುಟ್ಟಣ್ಣಯ್ಯ ಅವರ ಕುಟುಂಬದ ಪರವಾಗಿ ಅವರ ಸಹೋದರ ರಾಘವ ಪ್ರಕಾಶ್ ಯಾಗದಲ್ಲಿ ಪಾಲ್ಗೊಂಡು ತಮ್ಮ ಅತ್ತಿಗೆಯ ಆರೋಗ್ಯ ಚೇತರಿಕೆಯಾಗಿ ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿ ಹೋಮಕ್ಕೆ ಪೂರ್ಣಹುತಿ ಸಲ್ಲಿಸಿದರು. ಪೂಜಾ ಕೈಕಂರ್ಯ ಮುಗಿದ ಬಳಿಕ ತೀರ್ಥ ಪ್ರಸಾದ ವಿನಿಯೋಗಿಸಲಾಯಿತು. ಬಳಿಕ ಜನರಿಗೆ ಅನ್ನ ಸಂತರ್ಪಣೆ ಮಾಡಲಾಯಿತು.
ರೈತಸಂಘ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಎಣ್ಣೆಹೊಳೆಕೊಪ್ಪಲು ಮಂಜು, ವೈ.ಜಿ.ರಘು, ಕ್ಯಾಂಟೀನ್ ಜಯರಾಮು, ಡಿ.ಕೆ.ಜಯರಾಮು, ಸ್ವಾಮಿಗೌಡ, ಅಶೋಕ್, ಗೌಡಪ್ಪ ಇತರರು ಇದ್ದರು.