

ಪುತ್ತೂರು ಗ್ರಾಮಾಂತರ: ನನ್ನ ತವರು ಗ್ರಾಮವಾದ ಕೋಡಿಂಬಾಡಿಯನ್ನು ಎಂದಿಗೂ ಕಡೆಗಣಿಸಲಾರೆ. ಗ್ರಾಮದ ಅಭಿವೃದ್ಧಿಗೆ ಶಾಸಕನೆಂಬ ನೆಲೆಯಲ್ಲಿ ಗ್ರಾಮದ ಪ್ರಜೆಯಾಗಿ ಹೆಚ್ಚಿನ ಅನುದಾನ ನೀಡುವುದು ನನ್ನ ಕರ್ತವ್ಯವಾಗಿದೆ. ಗ್ರಾಮದ ಅಭಿವೃದ್ಧಿಗೆ ನನ್ನಿಂದ ಏನೆಲ್ಲಾ ಸಹಾಯ ಬೇಕೋ ಅದೆಲ್ಲವನ್ನೂ ನೀಡುತ್ತೇನೆ. ಎಲ್ಲ ಸಮಸ್ಯೆ ಪರಿಹರಿಸಿ ತಾಲೂಕಿನಲ್ಲಿಯೇ ಅತ್ಯುತ್ತಮ ಗ್ರಾಮವನ್ನಾಗಿ ಮಾಡುವಲ್ಲಿ ಶ್ರಮ ವಹಿಸುತ್ತೇನೆ ಎಂದು ಶಾಸಕ ಅಶೋಕ್‌ಕುಮಾರ್ ರೈ ಹೇಳಿದರು.
ಕೋಡಿಂಬಾಡಿ ಗ್ರಾಪಂ ನೂತನ ಕಚೇರಿ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. 30 ಲಕ್ಷ ರೂ. ವೆಚ್ಚದಲ್ಲಿ ಈ ಕಟ್ಟಡ ನಿರ್ಮಾಣವಾಗಲಿದ್ದು, ಅನುದಾನದ ಕೊರತೆಯಾದಲ್ಲಿ ಬೇಕಾದಷ್ಟು ಹಣ ಒದಗಿಸಲು ಸಿದ್ಧನಿದ್ದೇನೆ ಎಂದು ತಿಳಿಸಿದರು.
ಕೋಡಿಂಬಾಡಿ ಗ್ರಾಪಂ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು ಮಾತನಾಡಿ, ಗ್ರಾಮದ ಅಭಿವೃದ್ಧಿಗೆ ಪಣತೊಟ್ಟಿರುವ ಶಾಸಕರ ಕೈ ಬಲಪಡಿಸುವ ಕೆಲಸ ಗ್ರಾಮಸ್ಥರು ಮಾಡಬೇಕು. ಪಕ್ಷಾತೀತವಾಗಿ ಗ್ರಾಮಸ್ಥರು ಗ್ರಾಮದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಗ್ರಾಪಂ ಅಧ್ಯಕ್ಷೆ ಮಲ್ಲಿಕಾ ಅಧ್ಯಕ್ಷತೆ ವಹಿಸಿದ್ದರು. ತಾಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್‌ಕುಮಾರ್ ಭಂಡಾರಿ, ಗ್ರಾಪಂ ಸದಸ್ಯರಾದ ರಾಮಣ್ಣ ಗೌಡ, ಉಷಾ, ಪುಷ್ಪ, ಜಗನ್ನಾಥ ಶೆಟ್ಟಿ ನಡುಮನೆ, ಹಿಂದುಳಿದ ವರ್ಗಗಳ ಇಲಾಖೆ ಗಣೇಶ್ ಉಪಸ್ಥಿತರಿದ್ದರು.
ಜಯಪ್ರಕಾಶ್ ಬದಿನಾರ್ ಸ್ವಾಗತಿಸಿದರು. ಪಿಡಿಒ ವಿಲ್ಪ್ರೆಡ್ ಕಾರ್ಯಕ್ರಮ ನಿರೂಪಿಸಿದರು. ಕೋಡಿಂಬಾಡಿ ದೇವಸ್ಥಾನ ಅರ್ಚಕ ರಾಮಕೃಷ್ಣ ಭಟ್ ಶಿಲಾನ್ಯಾಸ ಪೂಜಾ ವಿಧಿವಿಧಾನ ನೆರವೇರಿಸಿದರು.