ಶಿಕಾರಿಪುರ, ಸೊರಬ ಕಣ್ಣಿದ್ದಂತೆ

15 ಎಸ್ಕೆಪಿ 4g
ಶಿಕಾರಿಪುರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನು ಮಧು ಬಂಗಾರಪ್ಪ ಉದ್ಘಾಟಿಸಿದರು. ಎಂ.ಚಂದ್ರಪ್ಪ, ಗೋಣಿ ಮಾಲತೇಶ್, ಎಸ್.ಪಿ.ನಾಗರಾಜ ಗೌಡ, ಎನ್.ರಮೇಶ್, ಆರ್.ಪ್ರಸನ್ನಕುಮಾರ್ ಇತರರಿದ್ದರು.
Published on

ಶಿಕಾರಿಪುರ: ಕಾಂಗ್ರೆಸ್‌ಗೆ ರಾಜ್ಯದ ಜನತೆ ಆಶೀರ್ವಾದ ಮಾಡಿ ನಿರೀಕ್ಷೆಗೂ ಮೀರಿ ಬಹುಮತ ನೀಡಿದ್ದಾರೆ. ಮುಂಬರುವ ಚುನಾವಣೆಗಳಿಗಾಗಿ ನಾವು ಒಟ್ಟಾಗಿ ಕೆಲಸ ಮಾಡಿ ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಪಟ್ಟಣದಲ್ಲಿ ಬುಧವಾರ ತಾಲೂಕು ಕಾಂಗ್ರೆಸ್ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, ನನಗೆ ಶಿಕಾರಿಪುರ ಮತ್ತು ಸೊರಬ ಎರಡು ಕಣ್ಣುಗಳಿದ್ದಂತೆ. ಸೊರಬದ ಜನತೆಯನ್ನು ಪ್ರೀತಿಸುವಷ್ಟೇ ಆತ್ಮೀಯವಾಗಿ ಶಿಕಾರಿಪುರದ ಜನತೆಯನ್ನೂ ಪ್ರೀತಿಸುತ್ತೇನೆ. ಕಾಂಗ್ರೆಸ್ ಸರ್ಕಾರ ಅತ್ಯಂತ ಸದೃಢವಾಗಿದೆ. ಶಿಕಾರಿಪುರದಲ್ಲಿ ನಮ್ಮ ಅಭ್ಯರ್ಥಿ ಸೋತಿಲ್ಲ. ಕಾರಣ ನಮ್ಮದೆ ಸರ್ಕಾರವಿರುವುದರಿಂದ ಜನಸೇವೆಗಾಗಿ ನೀವೇ ಅಧಿಕಾರ ಚಲಾಯಿಸಿ ಜನಹಿತ ಕಾಪಾಡಿ ಎಂದರು.
ಶಿಕಾರಿಪುರ ತಾಲೂಕಿನ ಜನತೆಗೆ ಆಗಬೇಕಾದಂತಹ ಕೆಲಸಗಳು ಸಾಕಷ್ಟಿವೆ, ನಮ್ಮ ಸರ್ಕಾರವೇ ಇರುವುದರಿಂದ ಜನರ ಕೆಲಸ ಕಾರ್ಯಗಳು ವಿಳಂಬವಾಗದಂತೆ ನೋಡಿಕೊಳ್ಳಿ. ಕಾಂಗ್ರೆಸ್ ಪಕ್ಷಕ್ಕೆ ತನ್ನದೇ ಆದಂತಹ ಇತಿಹಾಸವಿದೆ. ರಾಜ್ಯದಲ್ಲಿ ಕಾಂಗ್ರೆಸ್ ವಿಧಾನಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿದೆ. ಮುಂಬರುವ ಚುನಾವಣೆಗಳಲ್ಲಿ ಜನತೆಯ ಆಶೀರ್ವಾದ ಇದ್ದರೆ ನಮ್ಮ ಕಾರ್ಯಕರ್ತರ ಪರಿಶ್ರಮದಿಂದ ವಿಜಯಪತಾಕೆ ಹಾರಿಸಲಿದೆ ಎಂದರು.
ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ರಾಜ್ಯಸರ್ಕಾರ ಅದ್ಭುತವಾಗಿ ಜನಪರವಾಗಿ ಕೆಲಸ ಮಾಡುತ್ತಿದೆ. ಚುನಾವಣೆಗೆ ಮುನ್ನ ನೀಡಿದ ಐದು ಗ್ಯಾರಂಟಿಗಳಲ್ಲಿ ನಾಲ್ಕು ಆಶ್ವಾಸನೆಗಳನ್ನು ಈಡೇರಿಸಿದೆ. ಜನ ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸವಿಟ್ಟು ಮತ ಹಾಕಿದ್ದಾರೆ. ಅವರ ನಿರೀಕ್ಷೆಗೂ ಮೀರಿ ನಾವು ಹೆಚ್ಚಿನ ಕೆಲಸ ಮಾಡಬೇಕು. ರಾಜ್ಯ ಸರ್ಕಾರದ ಜನಪರವಾದ ಯೋಜನೆಗಳನ್ನು ಜನತೆಗೆ ತಲುಪಿಸು ವಂತಾಗಬೇಕು. ಜನರ ಮೂಲ ಸಮಸ್ಯೆಗಳನ್ನು ಅರಿತು ಅವುಗಳನ್ನು ನೀಗಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಹೇಳಿದರು.
ನಾನು ರೈತರಿಗಾಗಿ ಪಾದಯಾತ್ರೆ ಮಾಡಿದಾಗ ಶಿಕಾರಿಪುರದ ಮಣ್ಣಿನಲ್ಲಿಯೇ ನಮ್ಮ ಹೋರಾಟ ಸಾಗಿತ್ತು. ಆಗ ನಾನು ಜೆಡಿಎಸ್ ಪಕ್ಷದಲ್ಲಿದ್ದೆ. ನಮ್ಮ ಪಾದಯಾತ್ರೆಗೆ ಶಿಕಾರಿಪುರದಲ್ಲಿ ಕೆಲವರು ತಡೆ ಹಾಕಲು ಯತ್ನಿಸಿದಾಗ ಆಗ ನಮ್ಮ ಹೋರಾಟಕ್ಕೆ ಬೆಂಬಲವಾಗಿ ನಿಂತವರೇ ಗೋಣಿ ಮಾಲತೇಶ್. ಅವರು ಕಾಂಗ್ರೆಸ್‌ನಲ್ಲಿದ್ದರೂ ನಮ್ಮ ತಂದೆಯವರ ಜತೆಗಿನ ಅವರ ಒಡನಾಟ ಮತ್ತು ನಮ್ಮ ಜತೆಗಿನ ಒಡನಾಟ ಅಷ್ಟೊಂದು ಮಧುರವಾಗಿದೆ. ಹಾಗಾಗಿ ಅವರು ಅಂದು ನನಗೆ ಬೆಂಬಲವಾಗಿ ನಿಂತಿದ್ದನ್ನು ನಾನು ಯಾವತ್ತೂ ಮರೆಯಲು ಸಾಧ್ಯವಿಲ್ಲ ಎಂದರು.
ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆದಾಗ ನಾನು ನೀರಾವರಿ ಯೋಜನೆಗೆ ಮೊದಲು ಹಣ ಮೀಸಲಿರಿಸಿ ಎಂದು ಮನವಿ ಮಾಡಿದ್ದೆ. ಅದರಂತೆ ಅವರು 1,800 ಕೋಟಿ ರೂಪಾಯಿ ಗಳನ್ನು ನೀರಾವರಿ ಯೋಜನೆಗೆ ಇಟ್ಟಿದ್ದರು. ಶಿಕಾರಿಪುರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪರಿಶ್ರಮದಿಂದ ಅದ್ಭುತವಾದ ಕಚೇರಿ ನಿರ್ಮಾಣವಾಗಿದೆ. ಹೈಟೆಕ್ ಕಚೇರಿ ಮಾಡಿದ್ದೀರಿ. ನಿಮಗಿರುವ ಪಕ್ಷದ ಮೇಲಿನ ಅಭಿಮಾನ, ನಿಮಗಿರುವ ಪರಿಶ್ರಮಕ್ಕೆ ಯಾವತ್ತೂ ಬೆಲೆ ಕಟ್ಟಲು ಸಾಧ್ಯವೇ ಇಲ್ಲ, ಪ್ರತಿ ಕಾರ್ಯಕರ್ತನೂ ಪಕ್ಷದ ಆಸ್ತಿ. ಯಾವ ಕಾರಣಕ್ಕೂ ಕಾರ್ಯಕರ್ತರನ್ನು ಉಪೇಕ್ಷೆ ಮಾಡಬೇಡಿ. ಸಣ್ಣಪುಟ್ಡ ಕಾರಣಗಳಿಗಾಗಿ ಪಕ್ಷದಿಂದ ದೂರವಾದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಬಲಿಷ್ಠಗೊಳಿಸಿ ಎಂದು ಸಲಹೆ ನೀಡಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಎಂ.ಚಂದ್ರಪ್ಪ, ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್, ಆರ್.ಪ್ರಸನ್ನಕುಮಾರ್, ಎನ್.ರಮೇಶ್, ಗೋಣಿ ಮಾಲತೇಶ್, ನಗರದ ಮಹಾದೇವಪ್ಪ, ಕಲಗೋಡು ರತ್ನಾಕರ್, ಹುಲ್ಮಾರ್ ಮಹೇಶ್, ಕವಲಿ ಗಂಗಾಧರ್, ಉಳ್ಳಿ ದರ್ಶನ್, ಗೋಣಿ ಪ್ರಕಾಶ್, ಹುಲ್ಮಾರ್ ಶಿವು, ರಾಘವೇಂದ್ರ ನಾಯ್ಕ, ಉಮೇಶ್ ಮಾರವಳ್ಳಿ, ಅಶ್ವಿನ್, ನವಲೇಶ್, ಎಚ್.ಎಸ್.ರವೀಂದ್ರ, ಎಸ್.ಕೆ.ಮರಿಯಪ್ಪ ಇತರರಿದ್ದರು.
ಯಾವಾಗ ಎಡವಿ ಬೀಳ್ತಾರೋ…?:
ಇದೊಂದು ಅಪರೂಪದ ಕಾರ್ಯಕ್ರಮ. ಕಾಂಗ್ರೆಸ್ ಪಕ್ಷದ ಆತ್ಮವಿಶ್ವಾಸದ ಪ್ರತೀಕದಂತಿದೆ. ಕಳೆದ ಚುನಾವಣೆಯಲ್ಲಿ ಕೇವಲ ಪ್ರತಿಪಕ್ಷಗಳು ಸೋಲಲಿಲ್ಲ, ಅದರ ನಾಯಕರೂ ಮೂಲೆಗುಂಪಾದರು ಎಂದು ಮಾಜಿ ಎಂಎಲ್‌ಸಿ ಆಯನೂರು ಮಂಜುನಾಥ್ ಹೇಳಿದರು. ಬಂಗಾರಪ್ಪ ಅಪ್ಪಟ ಬಂಗಾರದಂತೆಯೇ ಬದುಕಿದವರು. ಅವರ ಮಗನಲ್ಲಿ ತಂದೆಯಂತೆಯೇ ಅದೇ ಜನಪರ ಕಳಕಳಿ, ಹೋರಾಟದ ಮನೋಭಾವನೆ ಬಂದಿದೆ. ಸಿದ್ದರಾಮಯ್ಯ ನಂತರ ಭವಿಷ್ಯದಲ್ಲಿ ಮಧು ಬಂಗಾರಪ್ಪ ಅವರೂ ಈ ನಾಡಿನ ಮುಖ್ಯಮಂತ್ರಿ ಆಗಲಿದ್ದಾರೆ ಎಂಬ ಅನಿಸಿಕೆ ನನ್ನದು ಎಂದ ಅವರು, ಕೆಲವರು ಕುರುಡನ ಮೇಲೆ ಕುಂಟ ಕುಳಿತು ಪ್ರಯಾಣ ಮಾಡಿದಂತಿದೆ , ಯಾವಾಗ ಎಡವಿ ಬೀಳ್ತಾರೋ ಗೊತ್ತಿಲ್ಲ ಎಂದು ಬಿಜೆಪಿ-ಜೆಡಿಎಸ್ ಮೈತ್ರಿಯನ್ನು ಲೇವಡಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net