ಶಿಕಾರಿಪುರ: ಅಮಟೆಕೊಪ್ಪ ಬಸವೇಶ್ವರ ದೇಗುಲ ಲೋಕಾರ್ಪಣೆ

28 ಎಸ್ಕೆಪಿ 1
ಶಿಕಾರಿಪುರ ತಾಲೂಕಿನ ಅಮಟೆಕೊಪ್ಪ ಗ್ರಾಮ ಶ್ರೀ ಬಸವೇಶ್ವರ ದೇವಾಲಯವನ್ನು ತೊಗರ್ಸಿ ಶ್ರೀಗಳು ಉದ್ಘಾಟಿಸಿದರು. ಶಿವಕುಮಾರ್ ಶಾಸ್ತ್ರಿ, ತ್ರಿಲೋಚನ ಶಾಸ್ತ್ರಿ ಇತರರಿದ್ದರು.
Published on

ಶಿಕಾರಿಪುರ: ಭಗವಂತನ ಆರಾಧನೆಯಿಂದ ಮನಸ್ಸು ರಾಗದ್ವೇಷಗಳಿಂದ ಮುಕ್ತವಾಗಿ ನಿರ್ಮಲ ಆಗುವುದಲ್ಲದೇ ಧರ್ಮೋತ್ಥಾನವೂ ಆಗುತ್ತದೆ ಎಂದು ತೊಗರ್ಸಿ ಮಳೆ ಹಿರೇಮಠದ ಶ್ರೀ ಮಹಾಂತ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.

ಸೋಮವಾರ ತಾಲೂಕಿನ ಅಮಟೆಕೊಪ್ಪ ಗ್ರಾಮದಲ್ಲಿ ಶ್ರೀ ಬಸವೇಶ್ವರ ದೇವಸ್ಥಾನದ ಲೋಕಾರ್ಪಣೆ, ಪ್ರಾಣ ಪ್ರತಿಷ್ಠಾಪನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದ ಶ್ರೀಗಳು, ಶ್ರಾವಣ ಅತ್ಯಂತ ಪವಿತ್ರವಾದ ಮಾಸ. ದೇವತಾರಾಧನೆಯಿಂದ ಭಗವಂತನ ಅನುಗ್ರಹ ಲಭಿಸಿ, ಸುಖ, ಸಮೃದ್ಧಿ, ಆರೋಗ್ಯ ಮತ್ತು ಮಾನಸಿಕ ನೆಮ್ಮದಿ ಪ್ರಾಪ್ತಿ ಆಗಲಿದೆ ಎಂದರು.
ಭಗವಂತನಿಗೆ ನಿಮ್ಮ ಭಕ್ತಿಗಿಂತ ಮಿಗಿಲಾದುದು ಯಾವುದೂ ಬೇಡ. ಈಮಣ್ಣಿನಲ್ಲಿ ಆಧ್ಯಾತ್ಮಿಕ ಬಲವಿದೆ. ನಮ್ಮ ಸಂಸ್ಕೃತಿ, ಸಂಸ್ಕಾರ ಪರಂಪರೆ, ಆಚಾರ ಮತ್ತು ಸಂಪ್ರದಾಯಗಳು ಅತ್ಯಂತ ವಿಶಿಷ್ಟವಾಗಿವೆ. ಇಂದು ಜಗತ್ತು ಭಾರತದ ಆಧ್ಯಾತ್ಮಿಕ ಶಕ್ತಿಗೆ ಮಾರು ಹೋಗಿದೆ. ನಾವು ನಮ್ಮ ಸಂಸ್ಕೃತಿಯಿಂದ ಎಂದಿಗೂ ವಿಮುಖರಾಗಬಾರದು ಎಂದು ಹೇಳಿದರು.
ಶಿಕಾರಿಪುರ ತಾಲೂಕು ಅಕ್ಷರಶಃ ಶರಣರ ನಾಡು. ಶೂನ್ಯ ಸಿಂಹಾಸನಾಧೀಶ್ವರ ಅಲ್ಲಮಪ್ರಭು, ಶರಣೆ ಅಕ್ಕಮಹಾದೇವಿ, ಶರಣೆ ಮುಕ್ತಾಯಕ್ಕ, ಶರಣೆ ಸತ್ಯಕ್ಕ ಸೇರಿದಂತೆ ಹತ್ತಾರು ಶರಣರು ಇಲ್ಲಿ ಜನಿಸಿ, ಈ ನೆಲದಲ್ಲಿ ಸಾಮಾಜಿಕ ಚಿಂತನೆಗಳನ್ನು ಹರಿಸಿ ಹೋಗಿದ್ದಾರೆ. ಅವರ ಕಾಯಕ, ದಾಸೋಹ, ಸಹಬಾಳ್ವೆಯ ಕಲ್ಪನೆ ಅದ್ಭುತವಾದದ್ದು. ಅಮಟೇಕೊಪ್ಪದ ಭಕ್ತರ ಎಣೆಯಿಲ್ಲದ ಭಕ್ತಿ ಮತ್ತು ಪರಿಶ್ರಮದ ಫಲವಾಗಿ ಇಂದು ಸುಂದರವಾದ ಶ್ರೀ ಬಸವೇಶ್ವರ ದೇವಾಲಯ ನಿರ್ಮಾಣವಾಗಿದೆ ಎಂದರು.
ಶಿವಕುಮಾರ್ ಶಾಸ್ತ್ರಿ, ತ್ರಿಲೋಚನ ಶಾಸ್ತ್ರಿ, ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಹಾಗೂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net