

ಶಿಗ್ಗಾಂವಿ: ಶಿಗ್ಗಾಂವಿ ಉಪಚುನಾವಣೆ ಪೂರ್ವದಲ್ಲಿ ಅಜ್ಜಂಪೀರ ಖಾದ್ರಿ ಅವರಿಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ ಕೊಟ್ಟ ಭರವಸೆಯಂತೆ ನಿಗಮದ ಅಧ್ಯಕ್ಷ ಸ್ಥಾನ ನೀಡಿದ್ದಾರೆ. ಅಭ್ಯರ್ಥಿ ಗೆಲುವಿನಲ್ಲಿ ಅವರದೂ ಶ್ರಮವಿದೆ ಎಂದು ವಸತಿ ಸಚಿವ ಜಮೀರ್ ಅಹ್ಮದ್ಖಾನ್ ಹೇಳಿದರು. ತಾಲೂಕಿನ ಹುಲಗೂರಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯರ್ತರ, ಅಭಿಮಾನಿಗಳ ಸಭೆಯಲ್ಲಿ ಅವರು ಮಾತನಾಡಿದರು. ಕ್ಷೇತ್ರದ ಜನರು ಬದಲಾವಣೆ ಬಯಸಿದ್ದರು. ಅದರಂತೆ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿದ್ದಾರೆ. ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲಾಗುವುದು. ರಾಜ್ಯದಲ್ಲಿ ಮೂರು ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಇಷ್ಟು ಅಂತರದಿಂದ ಗೆಲ್ಲುತ್ತಾರೆ ಅಂತ ನಿರೀಕ್ಷೆ ಮಾಡಿರಲಿಲ್ಲ. ಗೆಲ್ಲುವ ವಿಶ್ವಾಸವಿತ್ತು. ರಾಜ್ಯದ ಜನರಿಗೆ ವಕ್ಪ್ ವಿಚಾರದಲ್ಲಿ ಸತ್ಯ ಗೊತ್ತಿದೆ. ಈ ವಿಚಾರದಲ್ಲಿ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ ಅಂತ ಗೊತ್ತಿತ್ತು. ಶಾಸಕ ಬಸನಗೌಡ ಯತ್ನಾಳ್ ಅವರು ವಿಜಯಪುರದಲ್ಲಿ 1200 ಎಕರೆಯನ್ನು ವಕ್ಪ್ಗೆ ಬರೆಸಿಕೊಳ್ಳುತ್ತಿದ್ದಾರೆ ಅಂತ ಹೇಳಿದರು. ಬೇರೆಯವರ ಆಸ್ತಿಯನ್ನು ಯಾರೂ ಪಡೆಯಲು ಸಾಧ್ಯವಿಲ್ಲ ಎಂದರು. ವಕ್ಪ್ ಆಸ್ತಿ 1.12 ಲಕ್ಷ ಎಕರೆ ಇತ್ತು. ಈಗ 23 ಸಾವಿರ ಎಕರೆ ಇದೆ. ಅಲ್ಪಸಂಖ್ಯಾತರೇ ಒತ್ತುವರಿ ಮಾಡಿದ್ದಾರೆ. ಅದನ್ನು ನಾವು ತೆರವುಗೊಳಿಸುತ್ತೇವೆ. ರೈತರು ನಮಗೆ ಅನ್ನ ನೀಡುವ ಅನ್ನದಾತರು, ಅವರನ್ನು ಮುಟ್ಟಲು ಸಾಧ್ಯವೇ ? ಎಂದು ಪ್ರಶ್ನಿಸಿದರು. ನಮಗೆ ಉಪ ಚುನಾವಣೆಗಳಲ್ಲಿ ಎಲ್ಲ ಸಮಾಜದವರೂ ಮತ ನೀಡಿದ್ದಾರೆ. ಲಿಂಗಾಯತ, ಮರಾಠ ಎಲ್ಲರೂ ಮತ ಹಾಕಿದ್ದಾರೆ. ಶಿಗ್ಗಾಂವಿ ಗೆಲುವಿಗೆ ಸತೀಶ ಜಾರಕಿಹೊಳಿ ಕಾರಣ. ಅವರಿಗೆ ಕೆಪಿಸಿಸಿ ಅಧ್ಯಕ್ಷ ಹುದ್ದೆ ನಿಭಾಯಿಸುವ ಶಕ್ತಿ ಇದೆ. ಆದರೆ ತೀರ್ಮಾನ ಮಾಡಬೇಕಿರುವುದು ಹೈಮಾಂಡ್ ಎಂದರು. ನಸೀರ ಅಹಮದ್, ಶಾಸಕ ಯಾಸಿರಖಾನ್ ಪಠಾಣ, ಹೆಸ್ಕಾಂ ಅಧ್ಯಕ್ಷ ಸೈಯದ್ ಅಜ್ಜಂಪೀರ ಖಾದ್ರಿ, ಗಡಿ ಪ್ರದೇಶ ಅಭಿವೃದ್ಧಿ ನಿಗಮದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಇತರರು ಇದ್ದರು.
ಯಾಸೀರಖಾನ್ ಪಠಾಣ ಗೆಲುವು ನಿರೀಕ್ಷೆ ಯಾರಿಗೂ ಇರಲಿಲ್ಲ. ಆದರೆ, ನಿಮ್ಮೆಲ್ಲರ ಆರ್ಶೀವಾದದಿಂದ ಗೆದ್ದಿದ್ದಾರೆ. ಸಿಕ್ಕ ಅವಧಿಯಲ್ಲಿ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಮೂಲಕ ನಿಮ್ಮ ಪ್ರೀತಿ, ವಿಶ್ವಾಸ ಉಳಿಸಿಕೊಳ್ಳುವ ಕೆಲಸವನ್ನು ಶಾಸಕ ಪಠಾಣ ಮಾಡಬೇಕು. ಶಾಸಕರ ಜತೆಗೆ ಸಚಿವರು, ಸರ್ಕಾರವೂ ಇರುತ್ತದೆ. ಕ್ಷೇತ್ರದ ಅಭಿವೃದ್ಧಿಗೆ ಬೇಕುಗಳಿಗೆ ಸ್ಪಂದಿಸುತ್ತೇವೆ. | ಸತೀಶ ಜಾರಕಿಹೊಳೆ ಲೋಕೋಪಯೋಗಿ ಸಚಿವ