

ಶಿಗ್ಗಾಂವಿ: ತಾಲೂಕಿನ ಹಿರೆಮಲ್ಲೂರ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಪ್ರೌಢಶಾಲೆಗೆ ಶಾಲೆಯ ಶಿಕ್ಷಕಿಯ ಪತಿ ಬಂದು ಗಲಾಟೆ ಮಾಡಿ ಗ್ರಾಮಸ್ಥರು ಮತ್ತು ಶಾಲಾಭಿವೃದ್ದಿ ಮಂಡಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಹಿನ್ನೆಯಲ್ಲಿ ಶಿಕ್ಷಕಿಯನ್ನು ಬೇರೆಡೆಗೆ ವರ್ಗಾಯಿಸುವಂತೆ ಗ್ರಾಮಸ್ಥರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಘಟನೆ ಗುರುವಾರ ನಡೆದಿದೆ.
ಕಳೆದ ವರ್ಷ ಹಿರೆಮಲ್ಲೂರ ಗ್ರಾಮದ ಪ್ರಾಥಮಿಕ ಶಾಲೆಯನ್ನು ಉನ್ನತೀಕರಿಸಿ ಪ್ರೌಢಶಾಲೆಯನ್ನಾಗಿ ಮಾಡಲಾಗಿದೆ. ಪ್ರೌಢಶಾಲೆಗೆ ಹೊಸ ಮುಖ್ಯೋಪಾಧ್ಯಯರನ್ನು ನೇಮಕ ಮಾಡಲಾಗಿದೆ. ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿಯಾಗಿದ್ದ ಶೈಲಜಾ ಟಿ. ಶಾಲೆಯ ಸಹ ಶಿಕ್ಷಕರೂಂದಿಗೆ ಅಸಹಕಾರ ಮತ್ತು ವಿದ್ಯಾರ್ಥಿಗಳೊಂದಿಗೆ ವಿನಾಕಾರಣ ವಾಗ್ವಾದ ಮಾಡುತ್ತಿದ್ದರು. ಇದರಿಂದ ಶಾಲೆಯ ವಾತಾವರಣ ಹದಗೆಡುವಂತಾಗಿತ್ತು. ಹೀಗಾಗಿ, ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಆ. 29ರಂದು ಪಾಲಕರ ಸಭೆ ಕರೆದು ಸಮಸ್ಯೆ ಬಗೆಹರಿಸಿ ವಿದ್ಯಾರ್ಥಿಗಳ ಕಲಿಕೆಗೆ ಹೆಚ್ಚಿನ ಒತ್ತು ನೀಡುವಂತೆ ಗ್ರಾಮಸ್ಥರು ಮತ್ತು ಶಿಕ್ಷಕರಿಗೆ ಸೂಚಿಸಲಾಗಿತ್ತು.
ಗುರುವಾರ ನಡೆದ ಸಭೆಯಲ್ಲಿ ಮುಖ್ಯ ಶಿಕ್ಷಕಿ ಶೈಲಜಾ ಟಿ. ಅವರ ಪತಿ ಶಾಲೆಗೆ ಬಂದು ಪಾಲಕರು, ಎಸ್ಡಿಎಂಸಿ, ಗ್ರಾಪಂ ಸದಸ್ಯರೊಂದಿಗೆ ಕ್ಯಾತೆ ತೆಗೆದರು. ಆಗ ಸಮಸ್ಯೆ ಬಗೆಹರಿಸಲು ನಡೆಸಬೇಕಿದ್ದ ಸಭೆ ಮತ್ತಷ್ಟು ಬಿಗಡಾಯಿಸಿ, ಗ್ರಾಮಸ್ಥರು ಮತ್ತು ಮುಖ್ಯ ಶಿಕ್ಷಕಿಯ ಪತಿಯೊಂದಿಗೆ ವಾಗ್ವಾದ ನಡೆದು ಕೆಲ ಹೊತ್ತು ಗೊಂದಲ ಉಂಟಾಯಿತು.
ಶಾಲೆಗೆ ಸಂಬಂಧವಿಲ್ಲದ ವ್ಯಕ್ತಿ ಶಾಲಾ ಆವರಣದಿಂದ ಹೊರನಡೆಯುವಂತೆ ಗ್ರಾಮಸ್ಥರು ಹೇಳಿದರು. ಶಾಲಾ ಅಭಿವೃದ್ಧಿ ಮಂಡಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರಿಂದ ಆಕ್ರೋಶಗೊಂಡ ಗ್ರಾಮಸ್ಥರು, ಗ್ರಾಪಂ ಸದಸ್ಯರು, ಬಿಇಒ ಕಚೇರಿಗೆ ತೆರಳಿ ಶಿಕ್ಷಕಿಯನ್ನು ಬೇರೆಡೆ ವರ್ಗಾಯಿಸುವಂತೆ ಮನವಿ ಸಲ್ಲಿಸಿದರು.
ಹಿರೇಮಲ್ಲೂರ ಗ್ರಾಮಸ್ಥರ ಮನವಿ ಸ್ವೀಕರಿಸಿದ ಶಿಕ್ಷಣ ಇಲಾಖೆಯ ಅಧೀಕ್ಷಕ ರಾಘವೇಂದ್ರ ಬೊಂಗಾಳೆ ಮಾತನಾಡಿ, ಹಿರಿಯ ಅಧಿಕಾರಿಗಳೊಂದಿಗೆ ರ್ಚಚಿಸಿ ಸೂಕ್ತ ಕ್ರಮ ಜರಗಿಸುವ ಭರವಸೆ ನೀಡಿದರು.
ಬಿಇಒ ಕಚೇರಿ ವ್ಯವಸ್ಥಾಪಕ ಎಸ್.ಎಚ್. ಹೆಬಸೂರ, ಶಿಕ್ಷಣ ಸಂಯೋಜಕ ಉಮೇಶ ಎಸ್ ಆರ್., ಗ್ರಾಪಂ ಅಧ್ಯಕ್ಷ ರಾಮನಗೌಡ ಕರಿಗೌಡ್ರ, ಫಕೀರೇಶ ವಾಲ್ಮಿಕಿ, ಇಮಾಮಸಾಬ್ ನದಾಫ್, ಈಶ್ವರಗೌಡ ಹುತ್ತನಗೌಡ್ರ, ಲಕ್ಷ್ಮಣ ಮಡಿವಾಳರ, ಅಶೋಕ ಬುದನೂರ, ಸಂತೋಷ ದೊಡ್ಡಮನಿ, ಮೌಲಾಸಾಬ್ ಕಟಗಿ, ಪ್ರಕಾಶ ಕ್ಯಾಲಕೊಂಡ, ರಸೂಲಸಾಬ್ ನದಾಫ್, ಶಿವರಾಜ ಬೋರಣ್ಣವರ, ಮಂಜು ಬುದನೂರ, ನೀಲಪ್ಪ ಹರಿಜನ ಇತರರಿದ್ದರು.