ಕಳಪೆ ರಸ್ತೆ ಕಾಮಗಾರಿ ವಿರೋಧಿಸಿ ಪ್ರತಿಭಟನೆ

21-GSN-2 KARAVE
Published on

ಶಿಗ್ಗಾಂವಿ: ತಾಲೂಕಿನ ತಡಸ ಮಾರ್ಗವಾಗಿ ಹುಬ್ಬಳ್ಳಿ- ಶಿರಸಿ ರಾಜ್ಯ ಹೆದ್ದಾರಿ ರಸ್ತೆ ಕಾಮಗಾರಿ ಕಳಪೆ ಯಾಗಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ತಡಸ ಗ್ರಾಮ ಘಟಕದ ಸದಸ್ಯರು ತಡಸ ಗ್ರಾಮದ ಹುಬ್ಬಳ್ಳಿ-ಶಿರಸಿ ರಸ್ತೆಯಲ್ಲಿ ಸೋಮವಾರ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ಕಳೆದ ಎರಡು ವರ್ಷಗಳಿಂದ ಹುಬ್ಬಳ್ಳಿ-ಶಿರಸಿ ರಾಜ್ಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಬಹುತೇಕ ಕೆಲಸ ಮುಗಿಯುವ ಹಂತಕ್ಕೆ ಬಂದಿದೆ. ಡಾಂಬರೀಕರಣ ಮಾಡಿದ ಕೆಲವೆಡೆ ಡಾಂಬರು ಕಿತ್ತು ಹೋಗಿ ರಸ್ತೆಯುದ್ದಕ್ಕೂ ದೊಡ್ಡ ಗುಂಡಿ ನಿರ್ಮಾಣ ವಾಗಿವೆ. ತಡಸ ಗ್ರಾಮದಲ್ಲಿ ನಡೆಯುತ್ತಿರುವ ಇದೇ ಕಾಮಗಾರಿಯ ಕಾಂಕ್ರೀಟ್ ರಸ್ತೆ ಕೂಡ ಕಳಪೆಯಾಗಿದೆ. ಕೆಲವೆಡೆ ಕಾಂಕ್ರೀಟ್ ರಸ್ತೆ ಅಳತೆಗಿಂತ ಕಿರಿದಾಗಿ ನಿರ್ಮಿಸಲಾಗಿದೆ. ಇದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕಾಮಗಾರಿಯನ್ನು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಮನವಿ ಸ್ವೀಕರಿಸಿದ ಜಿಲ್ಲಾ ಲೋಕೋಪಯೋಗಿ ಕಾರ್ಯನಿರ್ವಾಹಕ ಅಧಿಕಾರಿ ಮಹಾಬಲೇಶಪ್ಪ ಕೆ., ರಸ್ತೆ ಕಾಮಗಾರಿ ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸುವುದಾಗಿ ತಿಳಿಸಿದರು. ಅಧಿಕಾರಿಗಳ ಭರವಸೆ ಮೇರೆಗೆ ಪ್ರತಿಭಟನಾಕಾರರು ಧರಣಿ ಹಿಂಪಡೆದರು. ಕರವೇ ಗ್ರಾಮ ಘಟಕದ ಪದಾಧಿಕಾರಿಗಳಾದ ಗಂಗಾಧರ ಬೆಂಡಲಗಟ್ಟಿ, ವಿಠ್ಠಲ್ ವಿಂಗೋಲಿ, ಸುರೇಶ ಗಾಣಿಗೇರ, ವಿನಾಯಕ ಬಡಿಗೇರ, ಮಂಜುನಾಥ ಪೂಜಾರ, ಮಂಜುನಾಥ ಭಜಂತ್ರಿ, ರಾಜೆಸಾಬ್ ಕೊಲ್ಲಾಪುರ, ಹಾಸಿಮಸಾಬ್ ಕಲಘಟಗಿ, ಮೈನುಸಾಬ್ ಹಂಚಿನಾಳ, ರಾಣಪ್ಪ ವಾಟಗಾರ, ಪರಶುರಾಮ ಭಜಂತ್ರಿ, ಜಿಲಾನಿ ಕೊಲ್ಲಾಪುರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net