

ಶಿಗ್ಗಾಂವಿ: ಮಕ್ಕಳು ಉತ್ತಮ ಆರೋಗ್ಯ ಹೊಂದಲು ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದು ಅವಶ್ಯ. ದೇಹದ ಸದೃಢತೆಗೆ ನಿತ್ಯ ಯೋಗ, ಪ್ರಾಣಾಯಾಮ ಮಾಡಿದರೆ ಮನಸನ್ನು ಹತೋಟಿಯಲ್ಲಿಡಲು ಸಾಧ್ಯವಾಗುತ್ತದೆ ಎಂದು ತಡಸ ಪೊಲೀಸ್ ಠಾಣೆಯ ಪಿಎಸ್‌ಐ ಸುಜಾತಾ ಪಾಟೀಲ ಹೇಳಿದರು. ಪಟ್ಟಣದ ಹೊರವಲಯದಲ್ಲಿರುವ ಫಿನಿಕ್ಸ್ ಇಂಟರ್‌ನಾಷನಲ್ ಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ರಾಷ್ಟ್ರೀಯ ಕ್ರೀಡಾ ದಿನ ಹಾಗೂ ವಿದ್ಯಾರ್ಥಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳ ಮಾನಸಿಕ ಸಾಮರ್ಥ್ಯವನ್ನು ಹಿಡಿದಿಡುವ ಕಡೆಗೆ ಪಾಲಕರು, ಶಿಕ್ಷಕರು ಗಮನ ಹರಿಸಬೇಕು. ಮಕ್ಕಳಿಗೆ ಇತ್ತೀಚಿನ ದಿನಗಳಲ್ಲಿ ದೈಹಿಕ ಸಾಮರ್ಥ್ಯ ಕಡಿಮೆಯಾಗುತ್ತಿದೆ. ಹೀಗಾಗಿ, ಮಕ್ಕಳು ಕ್ರೀಡೆಗಳಲ್ಲಿ ಭಾಗವಹಿಸಿ ತಮ್ಮ ದೈಹಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕು ಎಂದರು.ಸಂಸ್ಥೆ ಅಧ್ಯಕ್ಷ ಡಾ. ಎಂ.ಎಂ. ತಿರ್ಲಾಪುರ ಮಾತನಾಡಿ, ಮಕ್ಕಳ ಭವಿಷ್ಯದಲ್ಲಿ ಶಿಕ್ಷಕರ ಮತ್ತು ಪಾಲಕರ ಜವಾಬ್ದಾರಿ ಮಹತ್ವದ್ದು. ಮಕ್ಕಳ ಶೈಕ್ಷಣಿಕ ಬೆಳವಣಿಗೆ ಕುರಿತು ಪಾಲಕರು ಸದಾ ಗಮನಹರಿಸಬೇಕು ಎಂದರು. ಪ್ರಾಂಶುಪಾಲ ಮಂಜುನಾಥ ಕೆ ಎಚ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ಉಪಾಧ್ಯಕ್ಷ ನರಹರಿ ಕಟ್ಟಿ, ಕಾರ್ಯದರ್ಶಿ ಡಾ. ರಾಣಿ ಎಂ. ತಿರ್ಲಾಪುರ, ಗಿರೀಶ ಡಿ.ಬಿ. ಶಿಕ್ಷಕರು, ಪಾಲಕರು, ವಿದ್ಯಾರ್ಥಿಗಳು ಇದ್ದರು.