ಸೌಹಾರ್ದದಿಂದ ಹಬ್ಬ ಆಚರಿಸಿ

8-SGN-1SABHE GANESH
Published on

ಶಿಗ್ಗಾಂವಿ: ಪೂರ್ವಜರು ಮನುಕುಲಕ್ಕೆ ನೀಡಿದ ಹಬ್ಬ-ಹರಿದಿನಗಳು ಪರಸ್ಪರ ಶಾಂತಿ, ಸಂತೋಷಗಳನ್ನು ನೀಡುವ ಮೂಲಕ ಸೌಹಾರ್ದತೆಯನ್ನು ಬಿಂಬಿಸುವ ಸಂಕೇತವಾಗಿವೆ ಎಂದು ತಹಸೀಲ್ದಾರ್ ಸಂತೋಷ ಹಿರೇಮಠ ಹೇಳಿದರು.
ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ತಾಲೂಕಾಡಳಿತ ಭವನದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಪ್ರಯುಕ್ತ ಗುರುವಾರ ಏರ್ಪಡಿಸಿದ್ದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.
ನಮ್ಮ ಹಬ್ಬಗಳ ಆಚರಣೆ ಅರ್ಥಪೂರ್ಣವಾಗಿರಲಿ, ಅವರವರ ಹಬ್ಬಗಳ ಆಚರಣೆಗೆ ಯಾರೂ ತೊಂದರೆ ಮಾಡಬಾರದು. ಎಲ್ಲರೂ ಶಾಂತಿಯುತವಾಗಿ ಹಬ್ಬಗಳನ್ನು ಆಚರಿಸಬೇಕು ಎಂದರು.
ಸಿಪಿಐ ಸತ್ಯಪ್ಪ ಮಾಳಗೊಂಡ ಮಾತನಾಡಿ, ಗಣೇಶ ಹಬ್ಬ ವಿಘ್ನಗಳನ್ನು ನಿವಾರಿಸುವ ಹಬ್ಬವಾಗಿದೆ. ಆ ಭಾತೃತ್ವಭಾವ ಎಲ್ಲರಲ್ಲಿಯೂ ಇರಬೇಕು. ಹಬ್ಬಗಳಲ್ಲಿ ಬೇರೆ ಬೇರೆ ಚಟುವಟಿಕೆಗಳನ್ನು ಮಾಡಿ ಹಬ್ಬಗಳ ಪಾವಿತ್ರೃವನ್ನು ಹಾಳು ಮಾಡಬಾರದು. ಇಂದಿನ ಯುವಕರು ಭಕ್ತಿಯ ಉದ್ದೇಶವನ್ನ ಮರೆಯುತ್ತಿದ್ದಾರೆ. ಹಬ್ಬಗಳನ್ನ ಸಂಭ್ರಮಿಸಿ, ಎಲ್ಲ ಧರ್ಮಗಳನ್ನು ಗೌರವಿಸುವ ಮೂಲಕ ಶ್ರದ್ಧಾ ಭಕ್ತಿಯಿಂದ ಆಚರಿಸಬೇಕು ಎಂದರು.
ಸಭೆಯಲ್ಲಿ ಪಿಎಸ್‌ಐ ಉಮಾ ಪಾಟೀಲ, ಪುರಸಭೆ ಮುಖ್ಯಾಧಿಕಾರಿ ಬಸವಲಿಂಗಯ್ಯ, ಹೆಸ್ಕಾಂ ವಿಭಾಗ ಅಧಿಕಾರಿ ಕಲ್ಯಾಣಕರ, ವಿವಿಧ ಇಲಾಖೆ ಅಧಿಕಾರಿಗಳು, ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಂಡಳಿ ಸಂಘಟಕರು ಭಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net