ಸಹಕಾರಿ ರಂಗಕ್ಕಿದೆ ಮಹತ್ವದ ಸ್ಥಾನ

12-SGN- BOMMAYI
Published on

ಶಿಗ್ಗಾಂವಿ: ಪ್ರಜಾಪ್ರಭುತ್ವದಲ್ಲಿ ಸಹಕಾರಿ ರಂಗಕ್ಕೆ ಬಹಳ ಮಹತ್ವದ ಸ್ಥಾನವಿದೆ. ಬೇರೆ ರಾಜ್ಯಗಳಲ್ಲಿ ಸಹಕಾರ ಸಂಘ, ಸಂಸ್ಥೆಗಳು ಸರ್ಕಾರಗಳನ್ನು ಆಳುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸುತ್ತವೆ. ಆದರೆ, ನಮ್ಮ ರಾಜ್ಯದಲ್ಲಿ ಸರ್ಕಾರ ಸಹಕಾರಿ ರಂಗವನ್ನು ಆಳುವಂತಹ ಪರಿಸ್ಥಿತಿ ಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಪಟ್ಟಣದಲ್ಲಿ ಎಪಿಎಂಸಿ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಕೆಸಿಸಿ ಬ್ಯಾಂಕ್ ಶಿಗ್ಗಾಂವಿ ಶಾಖೆಯ ನೂತನ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಬೇರೆ ರಾಜ್ಯಗಳಲ್ಲಿ ಸಹಕಾರಿ ಸಂಘಗಳು ರೈತರ ದುಡಿಮೆ, ಪ್ರಗತಿಗಾಗಿ ಕೆಲಸ ನಿರ್ವಹಿಸುತ್ತವೆ. ರೈತರಿಗೆ ಕೋಟ್ಯಂತರ ರೂ. ಸಾಲ ಸೌಲಭ್ಯ ನೀಡುವ ಮೂಲಕ ತಮ್ಮ ಸಹಕಾರಿ ಪ್ರಭುತ್ವವನ್ನು ಮೆರೆಯುತ್ತಿವೆ. ಸಹಕಾರ ಸಂಘಗಳು ಪ್ರಬಲವಾದಾಗ ಮಾತ್ರ ಸರ್ಕಾರವನ್ನು ಆಳಲು ಸಾಧ್ಯ. ಈ ನಿಟ್ಟಿನಲ್ಲಿ ಸಹಕಾರ ಸಂಸ್ಥೆಗಳು ಕೆಲಸ ನಿರ್ವಹಿಸಬೇಕು ಎಂದರು.
15 ವರ್ಷಗಳ ಹಿಂದೆ ಕ್ಷೇತ್ರಕ್ಕೆ ನಾನು ಶಾಸಕನಾದ ಸಂದರ್ಭದಲ್ಲಿ ಜಿಲ್ಲೆಯ ಬಹುತೇಕ ಕೆಸಿಸಿ ಶಾಖೆಗಳು ತಮ್ಮ ಕಾರ್ಯವನ್ನು ಸ್ಥಗಿತಗೊಳಿಸಿದ್ದವು. ಧಾರವಾಡದ ಕೆಸಿಸಿ ಬ್ಯಾಂಕ್ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವುದು ಅದಕ್ಕೆ ಮುಖ್ಯ ಕಾರಣವಾಗಿತ್ತು. ಆಗ ಧಾರವಾಡ ಕೆಸಿಸಿ ಬ್ಯಾಂಕ್‌ನ ಕೆಲ ಹಿತಚಿಂತಕರು ಬ್ಯಾಂಕಿನ ಪುನಶ್ಚೇತನಕ್ಕಾಗಿ ಪ್ರತಿಭಟನೆ ನಡೆಸುವಂತಹ ಪರಿಸ್ಥಿತಿ ಬಂದಿತ್ತು. ಆಗ ನಾನು ಅಂದಿನ ನಿರ್ದೇಶಕ ಮಂಡಳಿಯೊಂದಿಗೆ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮನವೊಲಿಸಿ ವಿಶೇಷ ಅನುದಾನ ಕೊಡಿಸಿದೆ. ಈ ಮೂಲಕ ಧಾರವಾಡ ಕೆಸಿಸಿ ಬ್ಯಾಂಕ್ ಬೆಳವಣಿಗೆಯಾಗಲು ಸಾಧ್ಯವಾಯಿತು ಎಂದರು
ಬ್ಯಾಂಕ್‌ಗಳ ಚೈತನ್ಯದ ಸಲುವಾಗಿ ಕೇಂದ್ರ ಸರ್ಕಾರ ವೈದ್ಯನಾಥನ್ ಸಮಿತಿ ಜಾರಿಗೆ ತಂದಾಗ ಕೇಂದ್ರದ ಸಹಯೋಗದೊಂದಿಗೆ ರಾಜ್ಯದಲ್ಲಿ ಆಗಿನ ಬಿಜೆಪಿ ಸರ್ಕಾರ ಸುಮಾರು 400 ಕೋಟಿ ಹಣ ತುಂಬಿ, ಎಲ್ಲ ಡಿಸಿಸಿ ಬ್ಯಾಂಕ್‌ಗಳ ಎನ್‌ಪಿ ಕಡಿಮೆಗೊಳಿಸಲಾಯಿತು. ಇದರಿಂದಾಗಿ ಅದರ ಬಹುಪಾಲು ಲಾಭ ಕೆಸಿಸಿ ಬ್ಯಾಂಕ್‌ಗೆ ದೊರೆಯಿತು ಎಂದರು.
ಧಾರವಾಡ ಕೆಸಿಸಿ ಬ್ಯಾಂಕ್ 400 ಕೋಟಿ ರೂ. ಠೇವಣಿಯಿಂದ ಈಗ 950 ಕೋಟಿ ರೂ. ಠೇವಣಿ ಸಂಗ್ರಹಿಸುವ ಮೂಲಕ ಕೆಸಿಸಿ ಬ್ಯಾಂಕಿನ ಎಲ್ಲ ಶಾಖೆಗಳು ಅಭಿವೃದ್ಧಿಯಾಗಲು ಕೆಸಿಸಿ ಬ್ಯಾಂಕ್ ನಿರ್ದೇಶಕ ಮಂಡಳಿ ಕೊಡುಗೆ ಅನನ್ಯವಾಗಿದೆ ಎಂದರು.
ವಿರಕ್ತಮಠದ ಸಂಗನಬಸವ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕೆಸಿಸಿ ಬ್ಯಾಂಕ್ ನಿರ್ದೇಶಕ ಗಂಗಣ್ಣ ಸ್ವಾತಣ್ಣನವರ ಅಧ್ಯಕ್ಷತೆ ವಹಿಸಿದ್ದರು. ಕೆಸಿಸಿ ಬ್ಯಾಂಕ್ ಅಧ್ಯಕ್ಷ ಮಲ್ಲಿಕಾರ್ಜುನ ಹೊರಕೇರಿ, ನಿರ್ದೇಶಕ ಎಸ್.ವೈ. ಪಾಟೀಲ ಮಾತನಾಡಿದರು.
ನಿರ್ದೇಶಕ ಜಿ.ಪಿ. ಪಾಟೀಲ, ಲಿಂಗರಾಜ ಚಪ್ಪರದಹಳ್ಳಿ, ಎಂ.ಎಸ್. ದೇಸಾಯಿ, ಮುತ್ತಣ್ಣ ಎಲಿಗಾರ, ಎಸ್.ಎಚ್. ಸಂಗಾಪುರ, ಪಿ.ವೈ. ಗಣೇಶಕರ, ವೈ.ಆರ್. ಹೆಬಸೂರ, ಎಸ್.ಜಿ. ಮಹಾಂತಶೆಟ್ಟರ, ಎನ್.ಎಂ. ಮರೀಗೌಡ್ರ, ಕೆ. ಮುನಿಯಪ್ಪ, ಎಸ್.ಜಿ. ಸುಣಗಾರ, ಎನ್.ಎಸ್. ಪೂಜಾರ, ಜಿ.ಬಿ. ಕುಬೇರಹಳ್ಳಿ, ಶಿವಾನಂದ ನೀಲಗುಂದ, ಸತೀಶ ಕೋಟೆಣ್ಣನವರ, ಶಿವಪ್ಪ ಪತ್ರದ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net