ದೊಡ್ಡಾಟ, ಬಯಲಾಟ ಕಲೆ ಮುಂದುವರಿಯಲಿ

28-sgn-2 doddat
Published on

ಶಿಗ್ಗಾಂವಿ: ಇಂದಿನ ಆಧುನಿಕತೆಯ ಬಿರುಗಾಳಿಗೆ ನಮ್ಮ ಪೂರ್ವಜರ ಕಾಲದ ಜನಪದ ಕಲೆಗಳು ಇಂದು ಕಣ್ಮರೆಯಾಗುತ್ತಿವೆ. ಈ ಭಾಗದಲ್ಲಿ ದೊಡ್ಡಾಟ ಕಲೆ ಉಳಿಯಲು ಹುಲಸೋಗಿ ಗ್ರಾಮದ ಕಲಾವಿದರ ಶ್ರಮ ಬಹಳ ಇದೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಟಿ.ಎಂ. ಭಾಸ್ಕರ್ ಹೇಳಿದರು.

ತಾಲೂಕಿನ ಹುಲಸೋಗಿ ಗ್ರಾಮದಲ್ಲಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಹಾಗೂ ಹುಲಸೋಗಿ ಗ್ರಾಮದ ದೊಡ್ಡಾಟ ಕಲಾ ಬಳಗದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಪುಸ್ತಕ ಬಿಡುಗಡೆ ಹಾಗೂ ದೊಡ್ಡಾಟ ಕಲಾವಿದರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಹಾಗೂ ಹುಲಸೋಗಿ ಗ್ರಾಮಕ್ಕೂ ಅವಿನಾಭಾವ ಸಂಬಂಧವಿದೆ. ಪೂರ್ವಜರ ದೊಡ್ಡಾಟ, ಬಯಲಾಟ ಜನಪದ ಕಲೆಗಳನ್ನು ಜೀವಂತವಾಗಿಡಬೇಕು. ಅದಕ್ಕೆ ವಿಶ್ವವಿದ್ಯಾಲಯದ ಸಹಕಾರ ಸದಾ ಇರುತ್ತದೆ. ದೊಡ್ಡಾಟ ಕಲೆ ಉಳಿಯಲು ಯುವಕರು ಕಲೆ ಕಲಿಯಬೇಕು ಮತ್ತು ಪ್ರೋತ್ಸಾಹಿಸಬೇಕು. ಆ ನಿಟ್ಟಿನಲ್ಲಿ ಎಂ.ಎಸ್. ಮಾಳವಾಡ ಅವರು ಆಸಕ್ತಿವಹಿಸಿ ಎರಡು ದೊಡ್ಡಾಟದ ಪುಸ್ತಕಗಳನ್ನು ರಚಿಸಿದ್ದಾರೆ ಎಂದರು.

ಹಿರಿಯ ಸಾಹಿತಿ ಡಾ. ಬಾಳಸಾಹೇಬ್ ಲೋಕಾಪುರ ಮಾತನಾಡಿ, ವೀರ ವೀರಾಗಿ ಬಾಹುಬಲಿ ದೊಡ್ಡಾಟದ ಪುಸ್ತಕವು ಭರತ ಬಾಹುಬಲಿಯ ಚರಿತ್ರೆಯನ್ನು ತಿಳಿಸುತ್ತದೆ. ಜತೆಗೆ ನಮ್ಮ ನೆಲಮೂಲ ಸಂಸ್ಕೃತಿಯ ಸೊಗಡನ್ನು ಬಿತ್ತರಿಸುತ್ತದೆ ಎಂದರು.

ಪುಸ್ತಕ ವಿಮರ್ಶಕ ಡಾ. ಜಿನದತ್ತ ಹಡಗಲಿ ಮಾತನಾಡಿ, ಎಲ್ಲದಕ್ಕೂ ಮೂಲ ಜಾನಪದ ರಂಗಭೂಮಿ. ಅದರಲ್ಲಿಯೂ ವಿಶೇಷವಾಗಿ ಬಯಲಾಟ ರಂಗಭೂಮಿಗೆ ತನ್ನದೇ ಆದ ಇತಿಹಾಸವಿದೆ. ಎಂ.ಎಸ್. ಮಾಳವಾಡ ಅವರ ಕೃತಿಗಳು ಇಂದಿನ ಕಲಾಕ್ಷೇತ್ರಕ್ಕೆ ಉತ್ತಮ ಕೊಡುಗೆಯಾಗಲಿವೆ ಎಂದರು.

ಕಾರ್ಯಕ್ರಮದಲ್ಲಿ ಕೃತಿ ರಚನೆಕಾರ ಎಂ.ಎಸ್. ಮಾಳವಾಡ, ಸಾಹಿತಿ ಸತೀಶ ಕುಲಕರ್ಣಿ ಡಾ. ಜಗನ್ನಾಥ ಗೆಣಣ್ಣವರ, ಫಕೀರೇಶ ಕೊಂಡಾಯಿ ಮಾತನಾಡಿದರು. ಎಂ.ಎಸ್. ಮಾಳವಾಡ, ಸಾವಿತ್ರಮ್ಮ ಸೊಲಬಕ್ಕನವರ, ಫಕೀರೇಶ ಬಿಸಟ್ಟಿ ಹಾಗೂ ಹಿರಿಯ ದೊಡ್ಡಾಟ ಕಲಾವಿದರನ್ನು ಸನ್ಮಾನಿಸಲಾಯಿತು. ಕೊಟ್ರೇಶ ಮಾಸ್ತರ ಬೆಳಗಲಿ, ಎಸ್.ಎಫ್. ಮನಕಟ್ಟಿ, ನಾಗರಾಜ ಶಿಂಧೆ, ಪರಿಮಳ ಜೈನ, ಬಸವರಾಜ ಶಿಗ್ಗಾಂವಿ ಇತರರಿದ್ದರು. ಡಾ. ಚಂದ್ರಪ್ಪ ಸೊಬಟಿ ಸ್ವಾಗತಿಸಿದರು. ಶರೀಫ ಮಾಕಪ್ಪನವರ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net