

ಶಿಗ್ಗಾಂವಿ: ಗಾಳಿ ಬೀಸಿದರೆ ತಗಡಿನ ಶಬ್ದ, ನೆಲದ ಮೇಲೆ ಕುಳಿತರೆ ಕ್ರಿಮಿ,ಕೀಟಗಳ ಭಯ. ಒಂದು ಮೂಲೆಯಲ್ಲಿ ಅಡುಗೆ ಮನೆ, ಅದರಲ್ಲೊಂದು ಸಿಲಿಂಡರ್, ಪಕ್ಕದಲ್ಲಿ ಸ್ಟೋ, ನೆಲದ ಮೇಲೆ ಕುಳಿತು ಊಟ ಮಾಡುವ ಮಕ್ಕಳು. ಇದು ತಾಲೂಕಿನ ಹಿರೇಮಲ್ಲೂರ ಗ್ರಾಮದ ಅಂಗನವಾಡಿಯ ಕಥೆ-ವ್ಯಥೆ.
ಇಲ್ಲಿ ಸುಮಾರು 35ಕ್ಕೂ ಹೆಚ್ಚು ಮಕ್ಕಳು ಕಲಿಯುತ್ತಿದ್ದಾರೆ. ಅವರಿಗೆ ತಮ್ಮ ದುಸ್ಥಿತಿಯ ಬಗ್ಗೆ ಅರಿವಿಲ್ಲ. ಇವರ ಪಾಲಕರು ನಿತ್ಯ ಆತಂಕದಲ್ಲೆ ಮಕ್ಕಳನ್ನು ಅಂಗನವಾಡಿಗೆ ಕಳುಹಿಸುತ್ತಿದ್ದಾರೆ. ಅಂಗನವಾಡಿ ಕಟ್ಟಡ ಬಿರುಕು ಬಿಟ್ಟು ಕುಸಿಯುವ ಹಂತಕ್ಕೆ ತಲುಪಿದೆ. ಹೀಗಾಗಿ, ಒಂದು ವರ್ಷದಿಂದ ಸ್ಥಳೀಯರೊಬ್ಬರ ಮನೆಯನ್ನು ತಾತ್ಕಾಲಿಕವಾಗಿ ಬಾಡಿಗೆಗೆ ಪಡೆದು ಅಂಗನವಾಡಿ ನಡೆಸಲಾಗುತ್ತಿದೆ. ಅಂಗನವಾಡಿ ದುಸ್ಥಿತಿ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ, ಯಾವುದೆ ಪ್ರಯೋಜನವಾಗಿಲ್ಲ. ಪ್ರಾಥಮಿಕ ಹಂತದ ಶಿಕ್ಷಣಕ್ಕೆ ಒತ್ತು ನೀಡುತ್ತಿರುವ ಸರ್ಕಾರ, ಸರಿಯಾದ ಆಶ್ರಯ, ಮೂಲಸೌಕರ್ಯ ಕಲ್ಪಿಸದೆ ಮಕ್ಕಳ ಪ್ರಾಣದ ಜತೆ ಚೆಲ್ಲಾಟವಾಡುತ್ತಿದೆ ಎಂಬುದು ಸ್ಥಳೀಯರ ಆರೋಪ.
ತಾಲೂಕಿನಾದ್ಯಂತ ಒಟ್ಟು 236 ಅಂಗನವಾಡಿ ಕೇಂದ್ರಗಳಿವೆ. ಈ ಪೈಕಿ 186 ಅಂಗನವಾಡಿಗಳಿಗೆ ಸ್ವಂತ ಕಟ್ಟಡಗಳಿದ್ದರೆ, 50ಕ್ಕೆ ಸ್ವಂತ ಕಟ್ಟಡವೇ ಇಲ್ಲ. ಸ್ವಂತ ಕಟ್ಟಡವಿರುವ ಅಂಗನವಾಡಿ ಕೇಂದ್ರಗಳಿಗೆ ಅಡುಗೆ ಮನೆ, ವಿದ್ಯುತ್ ಸಂಪರ್ಕ, ನೀರಿನ ವ್ಯವಸ್ಥೆಯೂ ಸಮರ್ಪಕವಾಗಿಲ್ಲ. ಆಯಾ ಗ್ರಾಮಗಳಲ್ಲಿ ಮನೆಗಳನ್ನು ಬಾಡಿಗೆ ಪಡೆದು ಅಂಗನವಾಡಿ ಕೇಂದ್ರ ನಡೆಸಲಾಗುತ್ತಿದೆ.
ಗ್ರಾಮೀಣ ಪ್ರದೇಶದಲ್ಲಿ ಅಂಗನವಾಡಿ ಕಟ್ಟಡಕ್ಕೆ ಪ್ರತಿ ತಿಂಗಳು 2 ಸಾವಿರ ರೂ. ಬಾಡಿಗೆ ನೀಡಿದರೆ, ಪಟ್ಟಣ ಪ್ರದೇಶದಲ್ಲಿ ಪ್ರತಿ ತಿಂಗಳಿಗೆ ಒಂದು ಕಟ್ಟಡಕ್ಕೆ 4 ರಿಂದ 6 ಸಾವಿರ ರೂ. ಬಾಡಿಗೆ ನೀಡಲಾಗುತ್ತಿದೆ.
ಪಟ್ಟಣ ಸೇರಿ ತಾಲೂಕಿನಲ್ಲಿ ಬರೋಬ್ಬರಿ 50 ಅಂಗನವಾಡಿ ಕೇಂದ್ರಗಳು ಮೂಲಸೌಕರ್ಯಗಳಿಲ್ಲದ ಬಾಡಿಗೆ ಕಟ್ಟಡದಲ್ಲಿ ಹಲವು ವರ್ಷಗಳಿಂದ ನಡೆಯುತ್ತಿವೆ. ತಿಂಗಳಿಗೆ ಲಕ್ಷಾಂತರ ರೂ. ಬಾಡಿಗೆ ನೀಡಲಾಗುತ್ತಿದೆ. ಆಹಾರ, ಹಾಲು, ಮೊಟ್ಟೆ ಮತ್ತಿತರ ಧಾನ್ಯಗಳನ್ನು ಪೂರೈಸಲಾಗುತ್ತಿದೆ. ಆದರೂ, ಸಮರ್ಪಕವಾದ ಅಂಗನವಾಡಿ ಕಟ್ಟಡಗಳಿಲ್ಲದೆ ಮಕ್ಕಳಿಗೆ ಸರ್ಕಾರದ ಸೌಲಭ್ಯಗಳು ಸಮರ್ಪಕವಾಗಿ ಸಿಗದಿರುವುದಕ್ಕೆ ಪಾಲಕರು ಆಡಳಿತ ವ್ಯವಸ್ಥೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಹಲವು ಬಾರಿ ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ಕಾರ ಮಕ್ಕಳ ಪ್ರಾಣದೊಂದಿಗೆ ಚೆಲ್ಲಾಟ ವಾಡುತ್ತಿದೆ ಪ್ರಾಥಮಿಕ ಹಂತದ ಶಿಕ್ಷಣಕ್ಕೆ ಒತ್ತು ನೀಡುತ್ತಿರುವ ಸರ್ಕಾರ, ಸರಿಯಾದ ಆಶ್ರಯ ನೀಡದೆ ಮಕ್ಕಳನ್ನು ಮೂಲಸೌಕರ್ಯ ವಂಚಿತರನ್ನಾಗಿಸಿದೆ.
| ಈಶ್ವರಗೌಡ ಹುತ್ತನಗೌಡ್ರ ಸ್ಥಳೀಯ ನಿವಾಸಿ
ಗ್ರಾಮಿಣ ಪ್ರದೇಶಗಳಲ್ಲಿ ಕೆಲ ಸಣ್ಣಪುಟ್ಟ ಸಮಸ್ಯೆ ಇರುವ ಅಂಗನವಾಡಿ ಕೇಂದ್ರಗಳನ್ನು ಸ್ಥಳೀಯವಾಗಿ ದುರಸ್ತಿಗೊಳಿಸಿ ನಡೆಸಲಾಗುತ್ತಿದೆ. ಕೆಲವು ಕಟ್ಟಡಗಳನ್ನು ನೆಲಸಮಗೊಳಿಸಿ ಹೊಸ ಕಟ್ಟಡಗಳಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹಿರೇಮಲ್ಲೂರಿನಲ್ಲಿ ಸುಸಜ್ಜಿತ ಕಟ್ಟಡ ಸಿಗದಿರುವುದರಿಂದ ಅನಿವಾರ್ಯವಾಗಿ ಹಳೇ ಮನೆ ಬಾಡಿಗೆಗೆ ಪಡೆದು ಅಂಗನವಾಡಿ ನಡೆಸಲಾಗುತ್ತಿದೆ. ಶೀಘ್ರ ಅಲ್ಲಿಗೆ ಭೇಟಿ ನೀಡಿ ಪರ್ಯಾಯ ವ್ಯವಸ್ಥೆ ಮಾಡಲಾಗುವುದು.
| ಗಣೇಶಗೌಡ ಲಿಂಗನಗೌಡ್ರ
ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಶಿಗ್ಗಾಂವಿ