ಹಿಂದು ರುದ್ರಭೂಮಿಗೆ ಸೌಲಭ್ಯ ಕಲ್ಪಿಸಿ

BOMMAYI HINDU SMAJA MANAVI
Published on

ಶಿಗ್ಗಾಂವಿ: ತಾಲೂಕಿನ ತಡಸ ಗ್ರಾಮದಲ್ಲಿರುವ ಹಿಂದು ಸಮಾಜದ ರುದ್ರಭೂಮಿ ಅಭಿವೃದ್ಧಿಗೊಳಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ತಡಸ ಗ್ರಾಮ ಘಟಕದ ಪದಾಧಿಕಾರಿಗಳು ಶಾಸಕ ಬಸವರಾಜ ಬೊಮ್ಮಾಯಿ ಅವರಿಗೆ ಭಾನುವಾರ ಮನವಿ ಸಲ್ಲಿಸಿದರು.
ಗ್ರಾಮದ ಹೊರವಲಯದಲ್ಲಿರುವ ಸರ್ವೇ ನಂ. 403ರಲ್ಲಿ 19 ಎಕರೆ 33 ಗುಂಟೆ ಜಮೀನನ್ನು ಹಿಂದು ಸಮಾಜದ ಸ್ಮಶಾನಕ್ಕೆಂದು ಮೀಸಲಿಡಲಾಗಿದೆ. ಆದರೆ, ಸ್ಮಶಾನದಲ್ಲಿ ಮುಳ್ಳಿನ ಗಿಡಗಳು ಬೆಳೆದು ನಿಂತಿವೆ. ಶವ ಸಂಸ್ಕಾರಕ್ಕೆ ಬರುವ ಜನರಿಗೆ ತೊಂದರೆಯುಂಟಾಗುತ್ತಿದೆ. ವಿಶಾಲವಾದ ರುದ್ರ ಭೂಮಿಗೆ ಸೂಕ್ತವಾದ ರಸ್ತೆ, ವಿದ್ಯುತ್ ದೀಪ, ನೀರಿನ ಸೌಲಭ್ಯ, ಜನರಿಗೆ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಜತೆಗೆ ವಿದ್ಯುತ್ ಶವಾಗಾರದ ಅವಶ್ಯಕತೆ ಇದೆ. ಶಾಸಕರ ಅನುದಾನದಡಿ ರುದ್ರಭೂಮಿಯನ್ನು ನವೀಕರಣಗೊಳಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ರಕ್ಷಣಾ ವೇದಿಕೆ ತಾಲೂಕು ಘಟಕದ ಅಧ್ಯಕ್ಷ ಸಂತೋಷಗೌಡ ಪಾಟೀಲ, ತಡಸ ಗ್ರಾಮ ಘಟಕದ ಅಧ್ಯಕ್ಷ ಗಂಗಾಧರ ಬೆಂಡಲಗಟ್ಟಿ, ಸುರೇಶ ಗಾಣಿಗರ, ಪರಶುರಾಮ ಭಜಂತ್ರಿ, ವಿನಾಯಕ ಬಡಿಗೇರ, ರಾನಪ್ಪ ವಾಟಕರ, ಸಿದ್ದಪ್ಪ ಹರಿಜನ ಅನೇಕರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net