ಚಿಕಿತ್ಸೆ ಪಡೆದರೆ ಮೂಲವ್ಯಾಧಿ ಗುಣ

2-SGN MULVYADHI
Published on

ಶಿಗ್ಗಾಂವಿ(ಗ್ರಾ): ಮೂಲವ್ಯಾಧಿ ರೋಗಿಗಳು ಮುಜುಗರಕ್ಕೆ ಒಳಗಾಗದೇ ವೈದ್ಯರ ಸಲಹೆ, ಚಿಕಿತ್ಸೆ ಪಡೆದು ಆರೋಗ್ಯಯುತ ಜೀವನ ನಡೆಸಬಹುದಾಗಿದೆ ಎಂದು ಡಾ. ಶಿವಕುಮಾರ ಮೂಲಿಮಠ ಹೇಳಿದರು. ರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ ತಾಲೂಕಿನ ಬಿಸನಳ್ಳಿ ಗ್ರಾಮದ ಶ್ರೀ ಕಾಶಿ ವಿಶ್ವೇಶ್ವರ ಸಮುದಾಯ ಆಯುರ್ವೇದ ಆರೋಗ್ಯ ಕೇಂದ್ರ ಮತ್ತು ಸಂಶೋಧನಾ ಸಂಸ್ಥೆಯ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಉಚಿತ ಮೂಲವ್ಯಾಧಿ ರೋಗ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಶಿಬಿರದಲ್ಲಿ ಅವರು ಮಾತನಾಡಿದರು. ಮೂಲವ್ಯಾಧಿ ರೋಗವನ್ನು ಗಿಡಮೂಲಿಕೆಯಿಂದಲೂ ಗುಣಪಡಿಸಬಹುದಾಗಿದೆ. ಲೋಳೆಸರ ತಿರುಳನ್ನು ದಿನಕ್ಕೆ ಮೂರು ಬಾರಿ ಒಂದು ಚಮಚದಷ್ಟು ಸೇವಿಸಬೇಕು. ಮುಟ್ಟಿದರೆ ಮುನಿ ಮುಳ್ಳನ್ನು ಒಣಗಿಸಿ ಪುಡಿಮಾಡಿ ಒಂದು ಲೋಟ ನೀರಿಗೆ ಒಂದು ಚಮಚ ಪುಡಿ ಬೆರೆಸಿ ಊಟಕ್ಕೆ ಮುಂಚೆ ದಿನಕ್ಕೆರಡು ಬಾರಿ ಸೇವಿಸಬೇಕು. ಒಣ ಕರ್ಜೂರ, ಉತ್ತತ್ತಿಯನ್ನು ರಾತ್ರಿ ಹಾಲಿನಲ್ಲಿ ನೆನೆ ಇಟ್ಟು ಬೆಳಗ್ಗೆ ಹಾಲಿನ ಸಮೇತ ಸೇವಿಸಬೇಕು. ಇದರಿಂದ ಮೂಲವ್ಯಾಧಿ, ಗುದಗತ ರೋಗ ವಾಸಿಯಾಗುತ್ತವೆ. ಇದಕ್ಕೂ ಮುನ್ನ ವೈದ್ಯರ ಸಲಹೆ ಪಡೆಯುವುದು ಮುಖ್ಯ ಎಂದರು. ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಶಿಬಿರದಲ್ಲಿ 50ಕ್ಕೂ ಹೆಚ್ಚು ರೋಗಿಗಳ ತಪಾಸಣೆಗೆ ನಡೆಲಾಯಿತು. ಪ್ರೊ. ನಿಂಗಪ್ಪ ಕಲಕೋಟಿ, ಮುರಗೇಶ ಆಜೂರ, ಸಾಗರ ಕುರವತ್ತಿಮಠ, ಗುರುಶಾಂತಪ್ಪ ನರೇಗಲ್, ಗಂಗಾಧರ ಬಡ್ಡಿ, ಗದಿಗೆಪ್ಪ ಮಾಪಶೆಟ್ಟರ, ರಾಜು ಹುಲಮನಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net