

ಶಿಗ್ಗಾಂವಿ (ಗ್ರಾಮೀಣ): ತಾಲೂಕಿನ ಶಿಡ್ಲಾಪುರ ಗ್ರಾಮದಲ್ಲಿ ಶಂಕಿತ ಡೆಂಘೆ ಜ್ವರದಿಂದ 10 ವರ್ಷದ ಬಾಲಕಿ ಮೃತಪಟ್ಟ ಹಿನ್ನಲೆಯಲ್ಲಿ ಗ್ರಾಮದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ ಪಿಡಿಒಗೆ ಘೕರಾವ್ ಹಾಕಿ ಪಂಚಾಯಿತಿಗೆ ಗ್ರಾಮಸ್ಥರು ಶುಕ್ರವಾರ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ತೀವ್ರ ಜ್ವರದಿಂದ ಬಳಲುತ್ತಿದ್ದ ಶಿಡ್ಲಾಪುರ ಗ್ರಾಮದ ಬಾಲಕಿ ರೇಖಾ ವಿರೂಪಾಕ್ಷಪ್ಪ ದೊಡಮನಿ ಅವಳನ್ನು ಚಿಕಿತ್ಸೆಗಾಗಿ ಶಿಗ್ಗಾಂವಿ ತಾಲೂಕು ಆಸ್ಪತ್ರೆಗೆ ಆ. 5ರಂದು ದಾಖಲಿಸಲಾಗಿತ್ತು. ಬಾಲಕಿಯ ಆರೋಗ್ಯದಲ್ಲಿ ಸುಧಾರಣೆ ಕಾಣದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಬುಧವಾರ ಹುಬ್ಬಳ್ಳಿ ಕೆಎಂಸಿಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಶಂಕಿತ ಡೆಂಘ ಜ್ವರದಿಂದ ಶುಕ್ರವಾರ ಬೆಳಗ್ಗೆ ಬಾಲಕಿ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.
ಶಿಡ್ಲಾಪುರ ಗ್ರಾಮದಲ್ಲಿ ಈಗಾಗಲೇ 8 ಡೆಂಘ ಪ್ರಕರಣಗಳು ಪತ್ತೆಯಾಗಿವೆ. ಆದರೂ ಯಾವುದೇ ಮುಂಜಾಗ್ರತಾ ಕ್ರಮಕ್ಕೆ ಪಿಡಿಒ ಸುಧೀರ ಹಡಗಲಿ ಮುಂದಾಗಿಲ್ಲ. ಅಲ್ಲದೆ, ಮೂರು ದಿನಗಳಿಂದ ಗ್ರಾಮದಲ್ಲಿ ಕುಡಿಯಲು ಕೆರೆಯ ಕಲುಷಿತ ನೀರನ್ನು ಪೂರೈಸಲಾಗಿದೆ. ಇದರಿಂದ ಗ್ರಾಮಸ್ಥರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಚರಂಡಿಗಳು ತುಂಬಿ ಹರಿಯುತ್ತಿದ್ದರೂ ಸ್ವಚ್ಛತೆಗೆ ಮುಂದಾಗಿಲ್ಲ. ಕೇಳಿದರೆ ಹಾರಿಕೆ ಉತ್ತರ ನೀಡುತ್ತಾರೆ. ಪಿಡಿಒ ನಿರ್ಲಕಷ್ಯದಿಂದ ಬಾಲಕಿ ಮೃತಪಟ್ಟಿದ್ದಾಳೆ. ಕೂಡಲೇ ಪಿಡಿಒ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ತಹಸೀಲ್ದಾರ್ ಸಂತೋಷ ಹಿರೇಮಠ, ಪಿಎಸ್ಐ ನಿಂಗರಾಜ ಕರಕಣ್ಣನವರ, ಟಿಎಚ್ಒ ಡಾ. ಸತೀಶ, ಬಿಇಒ ಎಂ.ಎಂ. ಅಂಬಿಗೇರ ಮೃತ ಬಾಲಕಿ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ನಂತರ ಗ್ರಾಮದ ಸಮಸ್ಯೆಗಳ ಕುರಿತು ಸಾರ್ವಜನಿಕರಿಂದ ಮಾಹಿತಿ ಪಡೆದರು. ಚರಂಡಿಗಳ ಸ್ವಚ್ಛತೆ, ಶುದ್ಧ ಕುಡಿಯುವ ನೀರು ಪೂರೈಕೆ ವ್ಯವಸ್ಥೆ ಮಾಡುವಂತೆ ಪಂಚಾಯಿತಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮುಂದೆ ಇಂತಹ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮ ವಹಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಅಧಿಕಾರಿಗಳು ಭರವಸೆ ನೀಡಿದರು. ಬಳಿಕ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು.
ತಾಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷ ಯಲ್ಲಪ್ಪ ತಳವಾರ, ಮಲ್ಲೇಶಪ್ಪ ಚೊಟೆಪ್ಪನವರ, ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎಫ್.ಸಿ. ಕಾಡಪ್ಪಗೌಡ್ರ, ಎಂ.ಎಚ್. ಹೊಸಮನಿ, ಚಂದ್ರು ದೊಡಮನಿ, ಪ್ರವೀಣ ಗುಳಣ್ಣವರ, ಮುತ್ತಪ್ಪ ಕಲಕಟ್ಟಿ, ಮಂಜುನಾಥ ಬಡಪ್ಪನವರ, ಶಿವಪುತ್ರಪ್ಪ ಸಣ್ಣಮನಿ ಇತರರು ಇದ್ದರು.
ಶಿಡ್ಲಾಪುರ ಗ್ರಾಮದಲ್ಲಿ ಶಂಕಿತ ಡೆಂಘ ಜ್ವರದಿಂದ ಬಾಲಕಿ ಮೃತಪಟ್ಟ ಹಿನ್ನೆಲೆಯಲ್ಲಿ ಗ್ರಾಮದ ಪ್ರತಿ ಮನೆಗೆ ಆರೋಗ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಲಾರ್ವಾ ಸಮೀಕ್ಷೆ ಮಾಡುತ್ತಿದೆ. ಗ್ರಾಮದಲ್ಲಿ ಜ್ವರದ ಕ್ಲಿನಿಕ್ ಸ್ಥಾಪಿಸಿ ಜ್ವರದಿಂದ ಬಳಲುತ್ತಿರುವವರ ರಕ್ತ ಪರೀಕ್ಷೆ ನಡೆಸಿ ಅವರಿಗೆ ಸೂಕ್ತ ಔಷಧ ನೀಡಲಾಗುವುದು. ಪ್ರಕರಣ ಕಂಡು ಬಂದಲ್ಲಿ ಅವರಿಗೆ ತಜ್ಞ ವೈದ್ಯರಿಂದ ಸೂಕ್ತ ಚಿಕಿತ್ಸೆ ನೀಡಲಾಗುವುದು. | ಡಾ. ಸತೀಶ ತಾಲೂಕು ಆರೋಗ್ಯಾಧಿಕಾರಿ ಶಿಡ್ಲಾಪುರ ಗ್ರಾಮದ 5ನೇ ತರಗತಿ ವಿದ್ಯಾರ್ಥಿನಿ ಶಂಕಿತ ಡೆಂಘ ಜ್ವರಕ್ಕೆ ಬಲಿಯಾದ ಮೃತ ಬಾಲಕಿಯ ಕುಟುಂಬಕ್ಕೆ ಪರಿಹಾರ ನೀಡಲು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸೂಕ್ತ ದಾಖಲಾತಿ ಸಲ್ಲಿಸುತ್ತೇವೆ. ಆದಷ್ಟು ಬೇಗ ಪರಿಹಾರ ಒದಗಿಸಲು ಕ್ರಮ ಕ್ಐಗೊಳ್ಳಲಾಗುವುದು. ಗ್ರಾಮದಲ್ಲಿ ಮತ್ತೆ ಇಂತಹ ಪ್ರಕರಣಗಳು ಕಂಡು ಬರದಂತೆ ಫಾಗಿಂಗ್, ಚರಂಡಿಗಳ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು.| ಸಂತೋಷ ಹಿರೇಮಠ ತಹಸೀಲ್ದಾರ್ ಶಿಗ್ಗಾಂವಿ