

ಶಿಗ್ಗಾಂವಿ: ಜನರಿಗೆ ಬೇಡವಾದ ಭಾಗ್ಯಗಳನ್ನು ಜಾರಿಗೆ ತರುವ ಆತುರದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಆಡಳಿತವಧಿಯಲ್ಲಿ ಜಾರಿಗೊಳಿಸಿದ ರೈತಪರ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಸ್ಥಗಿತಗೊಳಿಸಿ, ರೈತ ವಿರೋಧಿ ಆಡಳಿತ ನಡೆಸುತ್ತಿದೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಶಿವಾನಂದ ಮ್ಯಾಗೇರಿ ಆರೋಪಿಸಿದರು.
ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಶುಕ್ರವಾರ ತಾಲೂಕು ಬಿಜೆಪಿ ಮಂಡಲ ರೈತ ಮೋರ್ಚಾ ವತಿಯಿಂದ ರಾಜ್ಯ ಸರ್ಕಾರದ ರೈತ ವಿರೋಧಿ ಆಡಳಿತ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಇರುವ ಕಾರಣ ತಾಲೂಕನ್ನು ಬರಪೀಡಿತ ಎಂದು ಘೋಷಣೆ ಮಾಡಿಲ್ಲ. ರೈತರು ಸಾಲ ಮಾಡಿ ಬೀಜ ಬಿತ್ತನೆ ಮಾಡಿದ್ದಾರೆ. ಬೆಳೆದು ನಿಂತ ಪೈರುಗಳು ಈಗ ಮಳೆ ಇಲ್ಲದೆ ಒಣಗಿವೆ. ಅನ್ನದಾತ ಸಂಕಷ್ಟಕ್ಕೆ ಸಿಲುಕಿದ್ದಾನೆ. ರಾಜ್ಯ ಸರ್ಕಾರ ತಕ್ಷಣವೇ ಶಿಗ್ಗಾಂವಿಯನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಿ ಸಂಕಷ್ಟದಲ್ಲಿರುವ ರೈತನ ನೆರವಿಗೆ ಮುಂದಾಗಬೇಕು ಎಂದರು.
ಹಿಂದೆ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ರೈತಪರ ಯೋಜನೆಗಳಾದ ಕಿಸಾನ್ ಸಮ್ಮಾನ್ ನಿಧಿ ಯೋಜನೆ, ರೈತ ವಿಧ್ಯಾನಿದಿ ಯೋಜನೆ, ಭೂ ಸಿರಿ ಯೋಜನೆ, ಶ್ರಮ ಶಕ್ತಿ, ರೈತ ಸಂಪದ, ಎಪಿಎಂಸಿ ಕಾನೂನು, ಕೃಷಿ ಭೂಮಿ ಮಾರಾಟ ಕಾನೂನು, ಜಿಲ್ಲೆಗೊಂದು ಗೋಶಾಲೆ, ಕ್ಷೀರ ಸಮೃದ್ಧಿ ಸೇರಿ ರೈತಪರ ಅನೇಕ ಯೋಜನೆಗಳನ್ನು ರದ್ದು ಮಾಡುವ ಮೂಲಕ ಕೃಷಿ ಕ್ಷೇತ್ರವನ್ನು ನಿರ್ಲಕ್ಷಿಸಲಾಗಿದೆ ಎಂದು ದೂರಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ 42 ಜನ ರೈತರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ವರದಿಯಾಗಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾಗ್ಯಗಳ ಬದಲಿಗೆ ಅನ್ನದಾತನ ಬದುಕಿಗೆ ಆಸರೆ ಆಗಬೇಕು ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಶ್ರೀಕಾಂತ ಬುಳ್ಳಕ್ಕನವರ, ಮಲ್ಲೇಶಪ್ಪ ಹರಿಜನ, ಪರಶುರಾಮ ಸೊನ್ನದ, ಕಿರಣ ಅವರಾದಿ ಮಾತನಾಡಿದರು. ನಂತರ ಪ್ರತಿಭಟನಾಕಾರರು ತಹಸೀಲ್ದಾರ್ ಸಂತೋಷ ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ತಹಸಿಲ್ದಾರರು ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ರವಾನಿಸುವುದಾಗಿ ತಿಳಿಸಿದರು.
ತಿಪ್ಪಣ್ಣ ಸಾತಣ್ಣವರ, ರೇಣುಕನಗೌಡ ಪಾಟೀಲ, ಡಿ. ಗೊಬ್ಬರಗುಂಪಿ, ಪ್ರತೀಕ ಕೊಳೆಕರ, ಬಸನಗೌಡ ಮೇಲಿನಮನಿ, ಮುತ್ತು ಯಾಲಿಗಾರ, ಪ್ರಶಾಂತ ಬಡ್ಡಿ, ಜಿನ್ನಪ್ಪ ವರೂರ, ಕೊಟ್ರಪ್ಪ ನಡೂರ, ವಿನಯ ಮುಂಡಗೋಡ, ಕಾಶೀನಾಥ ಕಳ್ಳಿಮನಿ, ರಾಜೇಶ ದೊಡ್ಡಮನಿ, ಸಂತೋಷ ದೊಡ್ಡಮನಿ ಇತರರು ಇದ್ದರು.