

ಶಿಗ್ಗಾಂವಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಭಯೋತ್ಪಾದಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ ಹೇಳಿಕೆ ಖಂಡನೀಯ. ಮುಖ್ಯಮಂತ್ರಿಗಳು ತಮ್ಮ ಹೇಳಿಕೆಯನ್ನು ವಾಪಸ್ ಪಡೆದು ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಎಂದು ಶಿಗ್ಗಾಂವಿ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ವಿಶ್ವನಾಥ ಹರವಿ ಒತ್ತಾಯಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಪ್ರಲ್ಹಾದ ಜೋಶಿ ಅವರು ಒಬ್ಬ ದೇಶಭಕ್ತ, ಅವರ ಬಗ್ಗೆ ಹಗುರವಾಗಿ ಮಾತನಾಡುವುದು ಮುಖ್ಯಮಂತ್ರಿಗಳಿಗೆ ಶೋಭೆ ತರುವುದಿಲ್ಲ. ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾದವರನ್ನು ನಿರಪರಾಧಿಗಳೆಂದು ಅವರ ಮೇಲಿರುವ ಕೇಸ್ ವಾಪಸ್ ಪಡೆಯುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಒಬ್ಬ ಭಯೋತ್ಪಾದಕರಾಗಿದ್ದಾರೆ ಎಂದು ಆರೋಪಿಸಿದರು.
ತಾಲೂಕು ಮಂಡಲ ಮಾಜಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಾಯಕರ ಮೇಲಿರುವ ಹಗರಣ, ಆರೋಪಗಳನ್ನು ಮರೆಮಾಚಿ ರಾಜ್ಯದ ಜನರ ಗಮನ ಬೇರೆಡೆ ಸೆಳೆಯಲು ಇಂತಹ ಹೇಳಿಕೆ ಕೊಡುವುದು ಅವರ ರಾಜಕೀಯ ತಂತ್ರಗಾರಿಕೆಯಾಗಿದೆ. ಸಿದ್ದರಾಮಯ್ಯನವರ ತಂತ್ರಗಾರಿಕೆ, ದೇಶ ವಿರೋಧಿ ಹೇಳಿಕೆಗಳನ್ನು ರಾಜ್ಯದ ಜನ ಒಪ್ಪುವುದಿಲ್ಲ. ಜೋಶಿ ಅವರ ಬಗ್ಗೆ ಹಗುರವಾಗಿ ನೀಡಿರುವ ಹೇಳಿಕೆಯನ್ನು 24 ಗಂಟೆಯೊಳಗೆ ವಾಪಸ್ ಪಡೆದು ಬಹಿರಂಗವಾಗಿ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಸಿದ್ದರಾಮಯ್ಯ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ಬಿಜೆಪಿ ಕಾರ್ಯದರ್ಶಿ ನರಹರಿ ಕಟ್ಟಿ, ರಾಜ್ಯ ಒಬಿಸಿ ಮೋರ್ಚಾ ಕಾರ್ಯದರ್ಶಿ ಸುಭಾಸ ಚೌಹಾಣ, ಸದಸ್ಯತ್ವ ಅಭಿಯಾನ ಸಂಚಾಲಕ ಸೋಮಶೇಖರ ಗೌರಿಮಠ, ರೇಣಕನಗೌಡ ಪಾಟೀಲ, ಹೊನ್ನಪ್ಪ ಹೂಗಾರ, ಬಸನಗೌಡ ಮೇಲಿನಮನಿ, ಸಂತೋಷ ದೊಡಮನಿ ಇತರರಿದ್ದರು.