ಶಿಗ್ಗಾಂವಿ-ಸವಣೂರ ಉಪ ಚುನಾವಣೆ: ಸೋಲು ಗೆಲುವು ಲೆಕ್ಕಾಚಾರ ಜೋರು

WEB Photo
Published on

ಶಿಗ್ಗಾಂವಿ: ಶಿಗ್ಗಾಂವಿ-ಸವಣೂರ ವಿಧಾನಸಭಾ ಕ್ಷೆತ್ರದ ಉಪ ಚುನಾವಣೆಯ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ಮುಗಿದ ಬೆನ್ನಲ್ಲೇ ಕ್ಷೇತ್ರಾದ್ಯಂತ ಅಭ್ಯರ್ಥಿಗಳ ಸೋಲು-ಗೆಲುವಿನ ಲೆಕ್ಕಾಚಾರ ಜೋರಾಗಿದೆ

ರಾಜಕೀಯ ಪಕ್ಷಗಳ ನಾಯಕರು, ಮುಖಂಡರು, ಕಾರ್ಯಕರ್ತರ ಮಧ್ಯೆ ಮಾಹಿತಿಗಳ ಕ್ರೋಡೀಕರಣ ನಡೆಯುತ್ತಿದ್ದು, ಹೋಟೆಲ್, ಅಂಗಡಿ ಮುಂಗಟ್ಟುಗಳಲ್ಲಿ, ಜಮೀನಿನಲ್ಲಿ ಕೆಲಸ ಮಾಡುವ ಕಾರ್ವಿುಕರು ಸಹ ಚುನಾವಣೆಯ ಸೋಲು, ಗೆಲುವಿನ ಬಗ್ಗೆಯೇ ಚರ್ಚೆ ಮಾಡುತ್ತಿದ್ದಾರೆ. ಆದರೆ, ಅಂತಿಮ ಫಲಿತಾಂಶಕ್ಕೆ ನ. 23ರವರೆಗೆ ಕಾಯುವುದು ಅನಿವಾರ್ಯವಾಗಿದೆ.

ಯಾವುದೇ ಚುನಾವಣೆಗಳಲ್ಲೂ ಜಾತಿ ವಿಚಾರ, ಅಭ್ಯರ್ಥಿಗಳ ಜನಪರ ಕೆಲಸಗಳು, ಸಂಘಟನೆ ಹಾಗೂ ವ್ಯಕ್ತಿಗಳ ಹಿಡಿತ ಇತ್ಯಾದಿಗಳು ಪ್ರಮುಖ ಪಾತ್ರ ವಹಿಸುತ್ತವೆ. ಆದರೆ, ಶಿಗ್ಗಾಂವಿ-ಸವಣೂರು ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರಕ್ಕಿಂತ ಪ್ರಮುಖವಾಗಿ ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಅವರ ಅಭಿವೃದ್ಧಿಯ ಜಪ ಒಂದು ಕಡೆ ಇದ್ದರೆ, ಆಡಳಿತ ಕಾಂಗ್ರೆಸ್ ಪಕ್ಷ ಹೇಗಾದರೂ ಮಾಡಿ ಕ್ಷೇತ್ರವನ್ನು ಈ ಬಾರಿ ಕೈ ವಶ ಮಾಡಿಕೊಳ್ಳಲು ನಾನಾ ತಂತ್ರಗಾರಿಕೆ ನಡೆಸಿದೆ.

ಆರೋಪ-ಪ್ರತ್ಯಾರೋಪ:

ಕಾಂಗ್ರೆಸ್ ಬಿಜೆಪಿ ನಾಯಕರ ನಡುವೆ ಹದಿನೈದು ದಿನಗಳಿಂದ ಸಾಕಷ್ಟು ಆರೋಪ ಪ್ರತ್ಯಾರೋಪಗಳು ನಡೆದಿವೆ. ಇದರ ನಡುವೆ ಜನಸಾಮಾನ್ಯರನ್ನು ಭೂತದಂತೆ ಕಾಡುತ್ತಿರುವ ವಕ್ಪ್ ವಿವಾದ, ಕೋವಿಡ್ ಪ್ರಕರಣ, ವಾಲ್ಮೀಕಿ ನಿಗಮ, ಮುಡಾ ಹಗರಣಗಳ ಕುರಿತು ಭಾರಿ ಮಾತಿನ ಸಮರ ನಡೆಸಿದ್ದಾರೆ.

ಬೊಮ್ಮಾಯಿ ಬಡವರಿಗೆ ಒಂದೂ ಮನೆ ನೀಡಿಲ್ಲ, ಮೂಲ ಸೌಕರ್ಯ ಕಲ್ಪಿಸಲಿಲ್ಲ ಎಂಬಂಥ ಆರೋಪಗಳನ್ನು ಆಧಾರ ಸಹಿತವಾಗಿ ಅಲ್ಲಗಳೆದದ್ದು ಬೊಮ್ಮಾಯಿಯವರ ಚಾಣಾಕ್ಷತನಕ್ಕೆ ಸಾಕ್ಷಿ.

ಆರೋಪ ಮಾಡುವವರು ತಮ್ಮ ಕ್ಷೇತ್ರದಲ್ಲಿ ಶಿಗ್ಗಾಂವಿಯಲ್ಲಿರುವಂಥ ರಸ್ತೆ ಇದೆಯೇ ಎಂದು ನೋಡಿಕೊಂಡು ಮಾತಾಡಲಿ ಎಂದು ಬೊಮ್ಮಾಯಿ ಸವಾಲು ಹಾಕಿದಾಗ ಕಾಂಗ್ರೆಸ್​ನವರು ಒಂದು ಕ್ಷಣ ಅಧೀರರಾಗಿದ್ದು ಸುಳ್ಳಲ್ಲ! ಹಾಗಾಗಿ, ಬೊಮ್ಮಾಯಿ ಸವಾಲನ್ನು ಬಹಿರಂಗವಾಗಿ ಸ್ವೀಕರಿಸಲು ಹೆಚ್ಚು ಆದ್ಯತೆ ನೀಡದೆ ಪಂಚ ಗ್ಯಾರಂಟಿಯೇ ಪರಮ ಶ್ರೇಷ್ಠ ಎಂದು ಪ್ರಚಾರ ಮಾಡಿದ್ದು ಗಮನಾರ್ಹ.

ಭರ್ಜರಿ ಮತದಾನ

ಉಪ ಚುನಾವಣೆಯ 241 ಮತಗಟ್ಟೆಗಳಲ್ಲಿ ಒಟ್ಟು 98,642 ಪುರುಷರು ಹಾಗೂ 92,522 ಮಹಿಳೆಯರು ಮತ್ತು ಇತರ ಇಬ್ಬರು ಸೇರಿ ಒಟ್ಟು 1,91,166 ಜನರು ಹಕ್ಕು ಚಲಾಯಿಸಿದ್ದಾರೆ. ಶೇ. 80.48 ಮತದಾನ ದಾಖಲಾಗಿದೆ.

ಉಪಚುನಾವಣೆಗೆ ಈ ರೀತಿಯಲ್ಲಿ ಮತದಾರರು ಸ್ಪಂದಿಸಲು ಪ್ರಮುಖ ರಾಜಕೀಯ ಪಕ್ಷಗಳ ‘ಕರಾಮತ್ತು’ ಕೂಡ ಕಾರಣ ಎನ್ನುವುದು ಬಹಿರಂಗ ಸತ್ಯ.

ಕಾಂಗ್ರೆಸ್​ಗೆ ಗ್ಯಾರಂಟಿ ನಂಬಿಕೆ

ರಾಜ್ಯ ಸರ್ಕಾರ ಜಾರಿಗೊಳಿಸಿದ ಪಂಚ ಗ್ಯಾರಂಟಿಗಳನ್ನು, ಬಿಜೆಪಿ ಆಡಳಿತ ಕಾಲದ ಹಗರಣಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಮತಯಾಚನೆ ಮಾಡಿತ್ತು. ಇಡೀ ರಾಜ್ಯ ಸರ್ಕಾರವೇ ಕ್ಷೇತ್ರದಲ್ಲಿ ತಿಂಗಳುಗಟ್ಟಲೆ ಬೀಡು ಬಿಟ್ಟಿದ್ದು ನಿಜ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕ್ಷೇತ್ರದಲ್ಲಿ ಎರಡೆರಡು ಬಾರಿ ಮತಬೇಟೆ ನಡೆಸಿದ್ದಾರೆ. ಗ್ಯಾರಂಟಿಗಳನ್ನು ಬಲವಾಗಿ ಪ್ರತಿಪಾದಿಸಿ, ಕುಟುಂಬ ರಾಜಕಾರಣ ವಿರುದ್ಧ ಅಬ್ಬರದ ಪ್ರಚಾರ ಮಾಡಿರುವುದು ಚುನಾವಣೆಯಲ್ಲಿ ಎಷ್ಟರ ಮಟ್ಟಿಗೆ ಮತಗಳಾಗಿ ಪರಿವರ್ತನೆಯಾಗಿದೆ ಎಂಬುದನ್ನು ಕಾದು ನೋಡಬೇಕಿದೆ.

ಅಭಿವೃದ್ಧಿ ಜತೆ ವಕ್ಪ್ ಅಸ್ತ್ರ

ಬಸವರಾಜ ಬೊಮ್ಮಾಯಿ ಅವರು ಕ್ಷೇತ್ರಕ್ಕೆ ಬಂದ ನಂತರ ಕ್ಷೇತ್ರವನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳುವ ಮೂಲಕ ತಮ್ಮ ಆಡಳಿತದಲ್ಲಿ ಯುವಕರು, ಮಹಿಳೆಯರಿಗೆ ಸಾಕಷ್ಟು ಉದ್ಯೋಗ ಸೃಷ್ಟಿಸಿದ್ದು, ಅಭಿವೃದ್ಧಿಯ ಮಂತ್ರದಂಡವನ್ನೇ ಅಸ್ತ್ರವನ್ನಾಗಿಸಿಕೊಂಡು ಮತ ಬೇಟೆ ನಡೆಸಿದ್ದಾರೆ. ಕಾಂಗ್ರೆಸ್ ಸರ್ಕಾರದ ವಕ್ಪ್ ಗೆ ಸಂಬಂಧಿಸಿದ ದ್ವಂದ್ವ ನೀತಿಯನ್ನು ಜನರಿಗೆ ತಲುಪಿಸುವ ಮೂಲಕ ಮತಯಾಚಿಸಿ, ನಮ್ಮ ಗೆಲುವು ನಿಶ್ಚಿತ ಎನ್ನುತ್ತಿದ್ದಾರೆ.

ಶಿಗ್ಗಾಂವಿ-ಸವಣೂರ ಕ್ಷೇತ್ರ ಶರಣರು, ಸಂತರ ನಾಡಾಗಿದೆ. ಜನರು ಪ್ರಭುದ್ಧರಾಗಿದ್ದಾರೆ. ನನ್ನ ತಂದೆಯವರು ನಡೆಸಿದ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿಕೊಂಡಿದ್ದಾರೆ. ಅಭಿವೃದ್ಧಿಯನ್ನು ನಿರಂತರವಾಗಿಸಲು ಪಣ ತೊಟ್ಟು ನಮ್ಮ ಕಾರ್ಯಕರ್ತರು ಬಿಜೆಪಿಯ ಗೆಲುವಿಗೆ ಶ್ರಮಿಸಿದ್ದು, ಹೆಚ್ಚಿನ ಮತಗಳ ಅಂತರದಿಂದ ವಿಜಯಿಯಾಗುವ ವಿಶ್ವಾಸವಿದೆ. | ಭರತ ಬೊಮ್ಮಾಯಿ, ಬಿಜೆಪಿ ಅಭ್ಯರ್ಥಿ ಕ್ಷೇತ್ರದ 15 ವರ್ಷಗಳ ವನವಾಸ ಅಂತ್ಯಗೊಳ್ಳಲಿದೆ. ರಾಜ್ಯದಲ್ಲಿ ನಮ್ಮದೇ ಸರ್ಕಾರ ಆಡಳಿತದಲ್ಲಿ ಇರುವುದರಿಂದ ಕ್ಷೇತ್ರದ ಅಭಿವೃದ್ಧಿಗಾಗಿ ಜನರು ಕಾಂಗ್ರೆಸ್ ಪಕ್ಷ ಬೆಂಬಲಿಸಿರುವ ವಿಶ್ವಾಸವಿದೆ. ನನ್ನ ಗೆಲುವು ನಿಚ್ಚಳವಾಗಿದೆ. | ಯಾಸೀರಖಾನ್ ಪಠಾಣ, ಕಾಂಗ್ರೆಸ್ ಅಭ್ಯರ್ಥಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net