ಶಿಕ್ಷಣ ಕ್ಷೇತ್ರಕ್ಕೆ ಉನ್ನತ ಕೊಡುಗೆ ನೀಡಿದ ಶಿಗ್ಗಾಂವಿ

GOVT SCHOOL FUNCTION
Published on

ಶಿಗ್ಗಾಂವಿ: ಶಿಗ್ಗಾಂವಿಯ ಮಣ್ಣು ಬಹಳ ಪವಿತ್ರವಾದುದು, ದಾನ ಧರ್ಮಕ್ಕೂ ಹೆಸರುವಾಸಿಯಾಗಿದ್ದು, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ದೊಡ್ಡ ಮಹನೀಯರನ್ನು ಈ ನಾಡಿಗೆ ಪರಿಚಯಿಸಿದ ಕ್ಷೇತ್ರವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಪಟ್ಟಣದ ಸರ್ಕಾರಿ ಮಾದರಿ ಗಂಡು ಮಕ್ಕಳ ಶಾಲೆಯಲ್ಲಿ ಭಾನುವಾರ ಅಭಿಮಾನಿ ಬಳಗದ ವತಿಯಿಂದ ಎಸ್.ಬಿ.ಬಿ.ಎಂ.ಡಿ. ಪ್ರೌಢ ಶಾಲೆ ಮತ್ತು ಸರ್ಕಾರಿ ಮಾದರಿ ಗಂಡು ಮಕ್ಕಳ ಶಾಲೆಯ ದ್ವಾರಬಾಗಿಲು ಉದ್ಘಾಟನಾ ಸಮಾರಂಭ ನೆರವೇರಿಸಿ ಅವರು ಮಾತನಾಡಿದರು. ಕೆಎಲ್​ಇ ಸ್ಥಾಪನೆಯ ಮೂಲ ಪುರುಷರು ಈ ತಾಲೂಕಿನ ಅರಟಾಳ ರುದ್ರಗೌಡರು. ಅವರ ಕೊಡುಗೆಯಿಂದ ಕೆಎಲ್​ಇ ಸಂಸ್ಥೆ ಇಂದು 300ಕ್ಕೂ ಹೆಚ್ಚು ಇಂಜಿನಿಯರಿಂಗ್, ಮೆಡಿಕಲ್, ಫಾರ್ಮಸಿ ಸೇರಿದಂತೆ ತನ್ನದೇ ಆದ ಯುನಿವರ್ಸಿಟಿಗಳೊಂದಿಗೆ ಹೆಸರುವಾಸಿಯಾಗಿವೆ. ರುದ್ರಗೌಡರ ಮಾರ್ಗದರ್ಶನದಲ್ಲಿ ಶಿರಸಂಗಿ ಲಿಂಗರಾಜ ದೇಸಾಯಿ ಅವರು ತಮ್ಮ ಆಸ್ತಿಯನ್ನು ಕರ್ನಾಟಕ ಲಿಂಗಾಯಿತ ಶಿಕ್ಷಣ ಸಂಸ್ಥೆಗೆ ದಾನವಾಗಿ ಕೊಡುವ ಮೂಲಕ ಸಂಸ್ಥೆಯ ಉತ್ತುಂಗಕ್ಕೆ ಕಾರಾಣೀಕರ್ತರಾಗಿದ್ದಾರೆ. ಅದು ನಮ್ಮ ತಾಲೂಕಿನ ಹಿರಿಮೆಯಾಗಿದೆ ಎಂದು ಶ್ಲಾಘಿಸಿದರು.

169 ವರ್ಷಗಳ ಇತಿಹಾಸ ಹೊಂದಿರುವ ಸರ್ಕಾರಿ ಮಾದರಿ ಗಂಡು ಮಕ್ಕಳ ಶಾಲೆಯು ಈ ನಾಡಿಗೆ ಇನ್ಪೋಸಿಸ್ ಮುಖ್ಯಸ್ಥರಾದ ಸುಧಾ ಮೂರ್ತಿ, ಖ್ಯಾತ ಅರ್ಥಶಾಸ್ತ್ರಜ್ಞ ಹಿರೇಮಲ್ಲೂರು ಈಶ್ವರನ್, ಸ್ಪೆಷಲ್ ಡಿಸಿಯಾಗಿ ಕೆಲಸ ನಿರ್ವಹಿಸುತ್ತಿರುವ ತಿರ್ಲಾಪುರ್ ಅವರಂಥ ಹಲವಾರು ಮಹನೀಯರನ್ನು ಈ ನಾಡಿಗೆ ಕೊಟ್ಟ ಕೀರ್ತಿ ಈ ಶಾಲೆಗೆ ಸಲ್ಲುತ್ತದೆ ಎಂದರು.

ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ, ವಿರಕ್ತ ಮಠದ ಸಂಗನಬಸವ ಮಹಾಸ್ವಾಮಿಗಳು ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಬಿ. ಅಂಬಿಗರ, ಎಸ್​ಡಿಎಂಸಿ ಅಧ್ಯಕ್ಷ ರವಿ ಮಡಿವಾಳರ, ಶಿವಾನಂದ ಮ್ಯಾಗೇರಿ, ರಾಘವೇಂದ್ರ ದೇಶಪಾಂಡೆ, ಸುಭಾಸ ಚೌಹಾಣ, ಪುರಸಭೆ ಅಧ್ಯಕ್ಷರು, ಸದಸ್ಯರು, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಇತರರು ಉಪಸ್ಥಿತರಿದ್ದರು.

330ಕ್ಕೂ ಹೆಚ್ಚು ಶಾಲೆ ಕೊಠಡಿ ಮಂಜೂರು

ಶಿಗ್ಗಾಂವಿ ಕ್ಷೇತ್ರವನ್ನು ಶಿಕ್ಷಣ ಕಾಶಿಯನ್ನಾಗಿ ಬೆಳೆಸುವ ಗುರಿ ಇಟ್ಟುಕೊಂಡಿದ್ದೇನೆ. ಸಿಬಿಎಸ್​ಸಿ ಸಂಸ್ಥೆಯಂತಹ 2ರಿಂದ 3 ಸಂಸ್ಥೆಗಳನ್ನು ಕ್ಷೇತ್ರಕ್ಕೆ ತಂದು ಇಲ್ಲಿನ ಮಕ್ಕಳು ಉನ್ನತ ಮತ್ತು ಗುಣಮಟ್ಟದ ಶಿಕ್ಷಣ ಪಡೆಯುವ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದೇನೆ. ಕ್ಷೇತ್ರದಲ್ಲಿ ಕಳೆದ ವರ್ಷ 330ಕ್ಕೂ ಹೆಚ್ಚು ಶಾಲಾ ಕೊಠಡಿಗಳನ್ನು ಮಂಜೂರಾತಿ ಮಾಡಿದ್ದು, ಈಗಾಗಲೇ 200 ಶಾಲಾ ಕೊಠಡಿಗಳು ಪೂರ್ಣ ಪ್ರಮಾಣದಲ್ಲಿ ನಿರ್ವಣಗೊಂಡಿವೆ. ಉಳಿದ 100ಕ್ಕೂ ಹೆಚ್ಚು ಕೊಠಡಿಗಳು ಬರುವ ಅಕ್ಟೋಬರ್, ನವಂಬರ್ ಒಳಗಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ಮಾಜಿ ಸಿಎಂ ಬೊಮ್ಮಾಯಿ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net