ಶಿಗ್ಗಾಂವಿ ಉಪಚುನಾವಣೆ: ಬಸವರಾಜ ಬೊಮ್ಮಾಯಿಗೆ ಪೂರ್ತಿ ಜವಾಬ್ದಾರಿ ನೀಡಿ

Shiggavi byelection meeting
Published on

ಶಿಗ್ಗಾಂವಿ: ಶಿಗ್ಗಾಂವಿ - ಸವಣೂರ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿಯ ಸಂಪೂರ್ಣ ಜವಾಬ್ದಾರಿಯನ್ನು ಸಂಸದ ಬಸವರಾಜ ಬೊಮ್ಮಾಯಿಯವರಿಗೆ ವಹಿಸಬೇಕು. ಅವರು ಸೂಚಿಸಿದ ವ್ಯಕ್ತಿಯನ್ನು ಪಕ್ಷದ ಅಭ್ಯರ್ಥಿಯೆಂದು ಹೈಕಮಾಂಡ್ ಘೊಷಣೆ ಮಾಡಬೇಕು. ಅಂದಾಗ ಮಾತ್ರ ಕ್ಷೇತ್ರವನ್ನು ಬಿಜೆಪಿ ಉಳಿಸಿಕೊಳ್ಳುವುದು ಸುಲಭ ಎಂದು ಕೆಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಗಂಗಣ್ಣ ಸಾತಣ್ಣನವರ ಹೇಳಿದರು.

ಪಟ್ಟಣದ ಹೊರವಲಯದಲ್ಲಿರುವ ಬಸವರಾಜ ಬೊಮ್ಮಾಯಿ ಅವರ ನಿವಾಸದಲ್ಲಿ ಭಾನುವಾರ ಅಭಿಮಾನಿ ಬಳಗದ ವತಿಯಿಂದ ಗಂಗಣ್ಣ ಸಾತಣ್ಣನವರ ಮತ್ತು ಶಿವಪ್ರಸಾದ ಸುರಗಿಮಠ ಅವರ ನೇತೃತ್ವದಲ್ಲಿ ನಡೆದ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವ ಮೂಲಕ ಹಿಂದುಳಿದ ಕ್ಷೇತ್ರವೆಂಬ ಹಣೆಪಟ್ಟಿಯಿಂದ ಹೊರಗೆ ತಂದ ಕೀರ್ತಿ ಬೊಮ್ಮಾಯಿಯವರಿಗೆ ಸಲ್ಲುತ್ತದೆ. ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ರಾಜ್ಯ ಸರಕಾರದ ಪ್ರಮುಖ ಹುದ್ದೆಗಳಾದ ಎಂಎಲ್​ಸಿ, ನಿಗಮ ಮಂಡಳಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ನಿರ್ದೇಶಕರ ಹುದ್ದೆಗಳನ್ನು, ಪ್ರಮುಖ ಸಾಂವಿಧಾನಿಕ ಹುದ್ದೆ, ನಾಮ ನಿರ್ದೇಶನ ಸದಸ್ಯರ ಹುದ್ದೆಗಳನ್ನು ಎಲ್ಲ ವರ್ಗದ ಸಾಮಾನ್ಯ ಕಾರ್ಯಕರ್ತರಿಗೆ ಕೊಟ್ಟಿದ್ದರು. ಗಂಗಮ್ಮ ಸೋಮಪ್ಪ ಬೊಮ್ಮಾಯಿ ಟ್ರಸ್ಟ್ ವತಿಯಿಂದ ವಿವಿಧ ಕ್ಷೇತ್ರಗಳಿಗೆ ಸೌಲಭ್ಯ ಕಲ್ಪಿಸಿ ಕ್ಷೇತ್ರವನ್ನು ಅಭಿವೃದ್ಧಿಪಡಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ ಎಂದರು.

ಉಪ ಚುನಾವಣೆಯಲ್ಲಿ ಬೂತ್ ಅಧ್ಯಕ್ಷರು, ಶಕ್ತಿ ಕೇಂದ್ರ, ಮಹಾಶಕ್ತಿ ಕೇಂದ್ರದ ಪ್ರಮುಖರು ಹಾಗೂ ಎಲ್ಲ ಪದಾಧಿಕಾರಿಗಳು ಹಾಲಿ ಹಾಗೂ ಮಾಜಿ ಚುನಾಯಿತ ಪ್ರನಿತಿಧಿಗಳು ಸೇರಿ ಪ್ರತಿಯೊಂದು ಬೂತ್​ನಲ್ಲಿ ಪಕ್ಷ ಸಂಘಟನೆ ಮಾಡಬೇಕು. ಈ ಮೂಲಕ ಉಪಚುನಾವಣೆಯ ಗೆಲುವಿನ ಜವಾಬ್ದಾರಿ ವಹಿಸಿಕೊಳ್ಳಬೇಕೆಂದು ಹೇಳಿದರು.

ಲಿಡ್ಕರ್ ನಿಗಮದ ಮಾಜಿ ಉಪಾಧ್ಯಕ್ಷ ಡಿಎಸ್ ಮಾಳಗಿ ಮಾತನಾಡಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಜೆ.ಸಿ. ಚಂದ್ರಶೇಖರ ಅವರು ಬೊಮ್ಮಾಯಿವರ ಅಭಿವೃದ್ಧಿ ಕಾರ್ಯಗಳ ಕುರಿತು ಲಘುವಾಗಿ ಮಾತನಾಡಿರುವುದು ಖಂಡನೀಯ. ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲರು ಕೇವಲ ರಾಜಕೀಯಕ್ಕೋಸ್ಕರ ಹೇಳಿಕೆ ನೀಡುವುದು ಸರಿಯಲ್ಲ ಎಂದರು.

ಶಿವಪ್ರಸಾದ ಸುರಗಿಮಠ, ಶಿಗ್ಗಾಂವಿ ಭಾಜಪ ಮಂಡಲ ಅಧ್ಯಕ್ಷ ವಿಶ್ವನಾಥ ಹರವಿ, ಸವಣೂರ ಭಾಜಪ ಮಂಡಲ ಅಧ್ಯಕ್ಷ ಹನಮಂತಪ್ಪ ಮುದಿಗೌಡ್ರ, ಶಶಿಧರ ಯಲಿಗಾರ, ಸುಭಾಸ ಚೌಹಾಣ, ಗಂಗಾಧರ ಬಾಣದ, ಡಾ. ಮಲ್ಲೇಶಪ್ಪ ಹರಿಜನ, ಶಶಿಧರ ಹೊನ್ನನವರ, ಸಿದ್ದಾರ್ಥಗೌಡ ಪಾಟೀಲ, ಸೋಮಶೇಖರ ಗೌರಿಮಠ, ಶೋಭಾ ನಿಸ್ಸಿಮಗೌಡ್ರ, ರೇಣುಕನಗೌಡ ಪಾಟೀಲ, ನವೀನ ರಾಮಗೇರಿ, ವೀರೇಶ ಸೊಬರದ, ಪುರಸಭೆ ಸದಸ್ಯರು, ವಿವಿಧ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net