ಜೀವನ ಸಾರ್ಥಕತೆಗೆ ಧರ್ಮ ಆಚರಣೆ ಅವಶ್ಯ

27-sgn- rambhapuri
Published on

ಶಿಗ್ಗಾಂವಿ: ಬಹು ಜನ್ಮಗಳ ಪುಣ್ಯ ಫಲದಿಂದ ಪ್ರಾಪ್ತವಾದ ಈ ಮಾನವ ಜೀವನ ಸಾರ್ಥಕಗೊಳ್ಳಲು ಧರ್ವಚರಣೆ ಅವಶ್ಯಕ. ಉಜ್ವಲ ಬಾಳಿನ ಭಾಗ್ಯೋದಯಕ್ಕೆ ಧರ್ಮ ದಿಕ್ಸೂಚಿಯಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಶಿಗ್ಗಾಂವಿ ತಾಲೂಕಿನ ಚಿಕ್ಕಮಣಕಟ್ಟಿ ಗ್ರಾಮದಲ್ಲಿ ಶ್ರೀ ನಂದೀಶ್ವರ ಮೂರ್ತಿ ಪ್ರತಿಷ್ಠ್ಠಾಪನೆ ಅಂಗವಾಗಿ ಮಂಗಳವಾರ ಏರ್ಪಡಿಸಿದ್ದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಮನುಷ್ಯನ ಬುದ್ಧಿಶಕ್ತಿಗೆ ತಕ್ಕಂತೆ ಭಾವನೆಗಳು ಬೆಳೆಯುತ್ತಿಲ್ಲ. ಉದಾತ್ತವಾದ ಧರ್ಮದ ಅರ್ಥ ವ್ಯಾಪ್ತಿಯನ್ನು ಅರಿಯದೇ ಜಾತಿಗೆ ಜೋಡಿಸಿ ಧರ್ಮಕ್ಕೆ ಚ್ಯುತಿ ತರುವ ಕೆಲಸವನ್ನು ಕೆಲವರು ಮಾಡುತ್ತಲೇ ಬಂದಿದ್ದಾರೆ. ಸತ್ಯ, ಧರ್ಮಕ್ಕೆ ಯಾವಾಗಲೂ ಜಯ ಇದ್ದೇ ಇರುತ್ತದೆ. ಆದರ್ಶ ಗುರಿಯೊಂದಿಗೆ ಸಮರ್ಥ ಗುರುವನ್ನು ಆಶ್ರಯಿಸಿ ಬದುಕು ಕಟ್ಟಿಕೊಳ್ಳಬೇಕು ಎಂದರು.

ಶ್ರೀ ಜಗದ್ಗುರು ರೇಣುಕಾಚಾರ್ಯರು ಸಾರಿದ ಮಾನವೀಯ ಮೌಲ್ಯಗಳನ್ನು ಶ್ರೀಮದ್ ರಂಭಾಪುರಿ ವೀರಗಂಗಾಧರ ಜಗದ್ಗುರುಗಳು ಬೋಧಿಸಿ ಜನ ಸಮುದಾಯವನ್ನು ಸನ್ಮಾರ್ಗಕ್ಕೆ ಕರೆ ತಂದಿರುವ ಪ್ರಾಮಾಣಿಕ ಪ್ರಯತ್ನ ಮರೆಯಲಾಗದು ಎಂದರು. ಚಿಕ್ಕಮಣಕಟ್ಟಿ ಗ್ರಾಮ ಚಿಕ್ಕದಾಗಿದ್ದರೂ ಅತ್ಯಂತ ಅರ್ಥಪೂರ್ಣ ಭವ್ಯ ಸಮಾರಂಭ ಹಮ್ಮಿಕೊಂಡಿರುವುದು ಸಂತೋಷ ಉಂಟು ಮಾಡಿದೆ. ಡಿ. 15ರಂದು ಹುಣ್ಣಿಮೆ ದಿನ ಲಿಂ. ಶ್ರೀಮದ್ ರಂಭಾಪುರಿ ವೀರರುದ್ರಮುನಿ ಜಗದ್ಗುರುಗಳವರ ಜನ್ಮ ಶತಮಾನೋತ್ಸವ ಶ್ರೀ ರಂಭಾಪುರಿ ಪೀಠದಲ್ಲಿ ಜರುಗುತ್ತಿದ್ದು, ಈ ಭಾಗದ ಭಕ್ತ ಸಮುದಾಯ ಪಾಲ್ಗೊಳ್ಳಬೇಕು ಎಂದು ಶ್ರೀಗಳು ಆಮಂತ್ರಿಸಿದರು. ಭಾರತ ಸೇವಾ ಸಂಸ್ಥೆ ಬನ್ನೂರ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಜಿಪಂ ಮಾಜಿ ಸದಸ್ಯ ಬಸನಗೌಡ ಇನಾಮತಿ 2025ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಮಾಡಿದರು.

ಮುಕ್ತಿಮಂದಿರ ಕ್ಷೇತ್ರದ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ಬಂಕಾಪುರ ಅರಳೆಲೆಮಠದ ರೇವಣಸಿದ್ಧೇಶ್ವರ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ದುಗ್ಲಿ- ಕಡೇನಂದಿಹಳ್ಳಿ ರೇವಣಸಿದ್ಧೇಶ್ವರ ಸ್ವಾಮೀಜಿ ಉಪದೇಶಾಮೃತ ನೀಡಿದರು. ಗಂಜಿಗಟ್ಟಿ ಡಾ. ವೈಜನಾಥ ಶಿವಲಿಂಗ ಶಿವಾಚಾರ್ಯರು, ಹಿರೇಮಣಕಟ್ಟಿ ವಿಶ್ವಾರಾಧ್ಯ ಶಿವಾಚಾರ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net