

ಹುಬ್ಬಳ್ಳಿ : ಇಲ್ಲಿನ ಮಂಟೂರ ರಸ್ತೆಯಲ್ಲಿ ನಿರ್ವಿುಸಿರುವ ಇಂದಿರಾ ಕಾಂಟೀನ ಸಂಪೂರ್ಣವಾಗಿ ಸ್ಮಶಾನದಲ್ಲಿ ಇಲ್ಲ. ಬದಲಾಗಿ, ಸ್ಮಶಾನಕ್ಕೆ ಹೊಂದಿಕೊಂಡು ಇದೆ. ಆ ಭಾಗದ ಜನರು ಅಲ್ಲಿ ಇಂದಿರಾ ಕ್ಯಾಂಟೀನ್ ಬೇಡವೆಂದು ಹೇಳಿದರೆ, ಬೇರೆಡೆ ಸ್ಥಳಾಂತರಿಸುವುದಾಗಿ ಎಂದು ಶಾಸಕ ಹಾಗೂ ಸ್ಲಮ್ ಬೋರ್ಡ್ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಹೇಳಿದರು.
ಇಲ್ಲಿನ ಮಹಾನಗರ ಪಾಲಿಕೆ ಮುಖ್ಯ ಕಚೇರಿ ಆವರಣದಲ್ಲಿ ನೂತನವಾಗಿ ನಿರ್ವಿುಸಿರುವ ತಮ್ಮ ಕಚೇರಿ ಕಟ್ಟಡದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸುಮಾರು 8 ಎಕರೆ ಜಾಗದಲ್ಲಿರುವ ಸ್ಮಶಾನದ ಮುಂಭಾಗದಲ್ಲಿ ಇಂದಿರಾ ಕ್ಯಾಂಟೀನ್ ಇದೆ. ಅದೂ, ಸ್ಮಶಾನಕ್ಕೂ ಮತ್ತು ಇಂದಿರಾ ಕ್ಯಾಂಟೀನ್ಗೂ ಮಧ್ಯದಲ್ಲಿ ಗೋಡೆ ನಿರ್ವಿುಸಲಾಗಿದೆ ಎಂದರು.
ಮಂಟೂರ ರಸ್ತೆಯಲ್ಲಿ ಶೇ. 70ರಷ್ಟು ಜನರು ದಲಿತರು ವಾಸವಾಗಿದ್ದಾರೆ. 2013ಕ್ಕೂ ಮೊದಲು ಈ ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಇದ್ದರು. ಆ ಸಂದರ್ಭದಲ್ಲಿ ಮಂಟೂರು ರಸ್ತೆ ಸೇರಿದಂತೆ ಸಂಪೂರ್ಣ ಕ್ಷೇತ್ರದಲ್ಲಿ ಅಭಿವೃದ್ಧಿ ಮರಿಚಿಕೆಯಾಗಿತ್ತು ಎಂದು ದೂರಿದರು.
ನಾನು ಶಾಸಕನಾದ ನಂತರ ಹು-ಧಾ ಪೂರ್ವ ಕ್ಷೇತ್ರವನ್ನು ಸಂಪೂರ್ಣ ಅಭಿವೃದ್ಧಿ ಮಾಡಿದ್ದೇನೆ. ಮಂಟೂರು ರಸ್ತೆ ಸ್ಮಶಾನದಲ್ಲಿ ಕೋಟ್ಯಾಂತರ ರೂ. ವೆಚ್ಚದಲ್ಲಿ ನೀರಿನ ಸೌಲಭ್ಯ, ಭದ್ರತಾ ಕೊಠಡಿ, ವಿದ್ಯುತ್ ದೀಪ, ವಿದ್ಯುತ್ ಚಿತಾಗಾರ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಹೇಳಿದರು.
ಈ ಸ್ಮಶಾಸನದ ಸುತ್ತಲಿನ ಬಡಾವಣೆಗಳಲ್ಲಿ ಬಡವರು, ದಲಿತರು ವಾಸಿಸುತ್ತಿದ್ದಾರೆ. ಈ ಭಾಗದಲ್ಲಿ ಇಂದಿರಾ ಕ್ಯಾಂಟೀನ್ ನಿರ್ವಣಕ್ಕೆ ಸರ್ಕಾರಿ ಜಾಗ ಸಿಗಲಿಲ್ಲ. ಹೀಗಾಗಿ, ಸ್ಮಶಾನದ ಮುಂಭಾಗದಲ್ಲಿ ಕ್ಯಾಂಟೀನ್ ನಿರ್ವಿುಸಲಾಯಿತು ಎಂದರು.
ಇಲ್ಲಿನ ಅನೇಕ ಜನರು ಬೆಳಗ್ಗೆ ಉಪಹಾರ ಸೇವಿಸದೇ ಕೆಲಸಕ್ಕೆ ಹೋಗುತ್ತಾರೆ. ಇಂದಿರಾ ಕ್ಯಾಂಟೀನ್ನಿಂದಾಗಿ ಬಡವರಿಗೆ ಕಡಿಮೆ ದರದಲ್ಲಿ ಉಪಹಾರ, ಊಟ ಸಿಗುತ್ತದೆ. ಇಲ್ಲಿ ಇಂದಿರಾ ಕ್ಯಾಂಟೀನ್ ನಿರ್ವಿುಸಿದ್ದರಿಂದ ವೈಯಕ್ತಿಕವಾಗಿ ನನಗೆ ಲಾಭ ಇಲ್ಲ. ಆದರೆ, ಬಡಜನರಿಗೆ ಹೆಚ್ಚು ಪ್ರಯೋಜನವಾಗಿದೆ ಎಂದು ಹೇಳಿದರು.
ಇಂದಿರಾ ಕ್ಯಾಂಟೀನ್ ವಿರೋಧಿಸುತ್ತಿರುವವರಿಗೆ ದಲಿತರ ಬಗ್ಗೆ ಕಾಳಜಿ ಇದ್ದರೆ ಸ್ಮಶಾನದಲ್ಲಿ ಕಟ್ಟಿಗೆ ಅಡ್ಡೆ ಹಾಗೂ ಮನೆಯನ್ನು ಅನಧಿಕೃತವಾಗಿ ನಿರ್ವಿುಸಿಕೊಂಡಿರುವವರ ವಿರುದ್ಧ ಹೋರಾಟ ಮಾಡಲಿ ಎಂದು ಸವಾಲು ಹಾಕಿದರು.
ಮಂಟೂರು ರಸ್ತೆಯ ಹರಿಶ್ಚಂದ್ರ ಸ್ಮಶಾನವನ್ನು ಹಂತ ಹಂತವಾಗಿ ಸಂಪೂರ್ಣ ಅಭಿವೃದ್ಧಿ ಮಾಡಲಾಗುವುದು ಎಂದು ತಿಳಿಸಿದರು.
ಶ್ರೀರಾಮ ಸೇನೆಯ ಪ್ರಮೋದ ಮುತಾಲಿಕ ಅವರು ಹೇಳಿದ್ದಾರೆ ಎಂದ ಮಾತ್ರಕ್ಕೆ ಇಂದಿರಾ ಕ್ಯಾಂಟೀನ್ ಸ್ಥಳಾಂತರಿಸಲು ಆಗುವುದಿಲ್ಲ. ಅಲ್ಲಿನ ಜನರು ಹೇಳಿದರೆ ಮಾತ್ರ ಸ್ಥಳಾಂತರಿಸಲಾಗುವುದು. ನನಗೆ ಪ್ರಮೋದ ಮುತಾಲಿಕ ಮತ ಹಾಕಿಲ್ಲ, ಬದಲಾಗಿ ಅಲ್ಲಿನ ಜನರು ಮತ ಚಲಾಯಿಸಿ ಗೆಲ್ಲಿಸಿದ್ದಾರೆ ಎಂದು ಹೇಳಿದರು.