ನೂತನ ಕಟ್ಟಡಕ್ಕೆ ಆಸ್ಪತ್ರೆ ಸೌಲಭ್ಯಗಳ ಸ್ಥಳಾಂತರ

hospital
Published on

ಮಡಿಕೇರಿ: ನಗರದ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆಯ ಹೊರ ರೋಗಿಗಳ ವಿಭಾಗದ ಆರೋಗ್ಯ ಸೌಲಭ್ಯಗಳು ಆಸ್ಪತ್ರೆಯ ಹಳೆ ಕಟ್ಟಡದಿಂದ ನೂತನ ಕಟ್ಟಡಕ್ಕೆ ಸ್ಥಳಾಂತರ ಕಾರ್ಯಕ್ಕೆ ಶಾಸಕ ಡಾ.ಮಂತರ್‌ಗೌಡ, ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾ ಕುಶಾಲಪ್ಪ ಭಾನುವಾರ ಚಾಲನೆ ನೀಡಿದರು.


ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾದ ಶಾಸಕ ಮಂತರ್‌ಗೌಡ, ಸುಜಾ ಕುಶಾಲಪ್ಪ ಅವರು ನೂತನ ಕಟ್ಟಡಕ್ಕೆ ಸ್ಥಳಾಂತರವಾಗಿರುವ ಹೊರ ರೋಗಿಗಳ ವಿಭಾಗದ ಜನರಲ್ ಮೆಡಿಸನ್, ಕಣ್ಣು, ಕಿವಿ-ಮೂಗು-ಗಂಟಲು, ಕೀಲು ಮತ್ತು ಮೂಳೆ, ಮಾನಸಿಕ ರೋಗ, ಶ್ವಾಸಕೋಶ ಮತ್ತು ಚರ್ಮ ರೋಗ ವಿಭಾಗಗಳಿಗೆ ಪ್ರತ್ಯೇಕವಾಗಿ ಭೇಟಿ ನೀಡಿ ವೀಕ್ಷಿಸಿದರು.


ಅಲ್ಲಿನ ಡಿ ದರ್ಜೆ ನೌಕರರು, ಶೂಶ್ರುಷಕರು, ಸಿಬ್ಬಂದಿಗಳು, ವೈದ್ಯರ ಜತೆ ಸಮಲೋಚಿಸಿದ ಅವರು, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಒಳ್ಳೆಯ ಹೆಸರು ತರಬೇಕು. ಸ್ವಚ್ಚತೆಗೆ ಹೆಚ್ಚು ಒತ್ತು ಕೊಡಬೇಕು. ರೋಗಿಗಳನ್ನು ಕುಟುಂಬದವರಂತೆ ಕಾಣಬೇಕು ಎಂದು ಸಲಹೆ ಮಾಡಿದರು.


ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ರತಿಯೊಬ್ಬರೂ ತಂಡವಾಗಿ ಕಾರ್ಯನಿರ್ವಹಿಸುವಲ್ಲಿ ಉತ್ತಮ ಹೆಸರು ಪಡೆಯಬಹುದು. ಅ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು ಎಂದರು.


ಬಳಿಕ ಶಾಸಕರಾದ ಡಾ.ಮಂತರ್‌ಗೌಡ ಅವರು, ಸ್ಕ್ಯಾನಿಂಗ್ ಕೇಂದ್ರಕ್ಕೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದರು. ಸ್ವತಃ ವೈದ್ಯರಾದ ಡಾ.ಮಂತರ್‌ಗೌಡ ಅವರು ಹೊರ ರೋಗಿಗಳ ಆರೋಗ್ಯ ತಪಾಸಣೆ ಮಾಡಿದ್ದು ವಿಶೇಷವಾಗಿತ್ತು.


ನಂತರ ಸುದ್ದಿಗಾರರ ಜೊತೆ ಮಾತನಾಡಿದ ಶಾಸಕರು, ಇತ್ತೀಚೆಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ ಅವರು ಕೊಡಗು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಒ.ಪಿ.ಡಿ ಅನ್ನು ನೂತನ ಕಟ್ಟಡಕ್ಕೆ ಸ್ಥಳಾಂತರಿಸಿರುವಂತೆ ನಿರ್ದೇಶನ ನೀಡಿದ್ದರು. ಅದರಂತೆ ಭಾನುವಾರ ಸ್ಥಳಾಂತರಿಸಲಾಗಿದೆ ಎಂದು ಹೇಳಿದರು.


ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯು ೩೦೦ ಹಾಸಿಗೆಯ ಆಸ್ಪತ್ರೆ ಒಳಗೊಂಡಿದೆ. ಈ ಕಟ್ಟಡದಲ್ಲಿ ಎರಡು ಮಹಡಿ ಪೂರ್ಣಗೊಳ್ಳಬೇಕಿದೆ. ಆ ನಿಟ್ಟಿನಲ್ಲಿ ಸರ್ಕಾರದಿಂದ ೬೦ ಕೋಟಿ ರೂ. ಬಿಡುಗಡೆಯಾಗಲಿದ್ದು, ಒಳ್ಳೆಯ ಆಸ್ಪತ್ರೆ ನಿರ್ಮಾಣವಾಗಲಿದೆ ಎಂದು ಶಾಸಕರು ಹೇಳಿದರು.


ಹೊಸ ಕಟ್ಟಡದಲ್ಲಿ ಈ ವರ್ಷವೇ ಹೃದ್ರೋಗ ವಿಭಾಗ ಆರಂಭವಾಗಲಿದೆ. ಈ ಸಂಬಂಧ ನೂತನ ಕಟ್ಟಡದಲ್ಲಿ ಜಾಗ ಕಾಯ್ದಿರಿಸಲಾಗಿದ್ದು, ಎಲ್ಲಾ ರೀತಿಯ ಸಿದ್ಧತೆಗಳು ನಡೆದಿವೆ. ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ತಜ್ಞ ವೈದ್ಯರಿದ್ದು ಎಲ್ಲಾ ರೀತಿಯ ಆರೋಗ್ಯ ಸೌಲಭ್ಯಗಳು ದೊರೆಯಲಿವೆ ಎಂದು ತಿಳಿಸಿದರು.


ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಮತ್ತು ನಿರ್ದೇಶಕ ಡಾ.ವಿಶಾಲ್ ಕುಮಾರ್, ಜಿಲ್ಲಾ ಸರ್ಜನ್ ಡಾ.ನಂಜುಂಡಯ್ಯ, ಸ್ಥಾನಿಕ ವೈದ್ಯಾಧಿಕಾರಿ ಡಾ.ಸತೀಶ್, ಡಾ.ರೂಪೇಶ್ ಗೋಪಾಲ್, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಕಾನೆಹಿತ್ಲು ಮೊಣ್ಣಪ್ಪ, ಚಂದ್ರಶೇಖರ್, ಪ್ರಮುಖರಾದ ಚುಮ್ಮಿ ದೇವಯ್ಯ, ತೆನ್ನೀರ ಮೈನ, ಜಾನ್ಸನ್, ಜುಲೇಕಾಬಿ, ಲೀಲಾ ಶೇಷಮ್ಮ, ಸುರೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net