

ಹುಬ್ಬಳ್ಳಿ: ಇಲ್ಲಿಯ ಮಂಟೂರ ರಸ್ತೆ ಹಿಂದು ರುದ್ರಭೂಮಿ ಜಾಗದಲ್ಲಿ ಇಂದಿರಾ ಕ್ಯಾಂಟೀನ್ ನಿಮಿರ್ಸಲು ಹೊರಟಿರುವುದನ್ನು ವಿರೋಧಿಸಿ ಸೆ. 26ರಂದು ಸಲಕಿ, ಗುದ್ದಲಿಯೊಂದಿಗೆ ಸ್ಮಶಾನ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀರಾಮ ಸೇನೆ ಅಧ್ಯಕ್ಷ ಗಂಗಾಧರ ಕುಲಕರ್ಣಿ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಮಶಾನ ಜಾಗ ಕಬಳಿಸಿ ಕ್ಯಾಂಟೀನ್ ನಿರ್ಮಾಣ ಮಾಡಬಾರದು. ಬೇರೆ ಕಡೆ ಸ್ಥಳಾಂತರ ಮಾಡಬೇಕು. ಸೆ. 25ರೊಳಗೆ ನಿರ್ಧಾರ ಬದಲಿಸದಿದ್ದರೆ ಸೆ. 26ರಂದು ಬೆಳಗ್ಗೆ ರೈಲು ನಿಲ್ದಾಣ ಬಳಿಯ ಡಾ. ಅಂಬೇಡ್ಕರ್ ವೃತ್ತದಿಂದ ನೂರಾರು ಕಾರ್ಯಕರ್ತರು ಮೆರವಣಿಗೆ ಮೂಲಕ ಪ್ರತಿಭಟಿಸಲಿದ್ದಾರೆ. ಅಲ್ಲಿನ ಕ್ಯಾಂಟೀನ್ ನಿರ್ಮಾಣ ಕಿತ್ತು ಹಾಕಲಾಗುವುದು ಎಂದು ಎಚ್ಚರಿಸಿದರು.
ಕ್ಯಾಂಟೀನ್ ವಿಷಯದಲ್ಲಿ ಶಾಸಕ ಪ್ರಸಾದ ಅಬ್ಬಯ್ಯ ಅವರು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಏಕವಚನದಲ್ಲಿ ಸಂಭೋದಿಸಿದ್ದಾರೆ. ದಲಿತರಿಗೆ ಏನು ಮಾಡಿದ್ದಾರೆ, ಅವರ ತಾಕತ್ತು ಏನು? ಎಂದೆಲ್ಲ ಸವಾಲು ಹಾಕಿದ್ದಾರೆ. ಹಿರಿಯರಿಗೆ ಗೌರವ ನೀಡಬೇಕು, ಮೊದಲು ಅವರು ಮುತಾಲಿಕ್ ಅವರ ಕ್ಷಮೆ ಕೋರಬೇಕು. ಇಲ್ಲದಿದ್ದರೆ ಶಾಸಕರು ಪಾಲ್ಗೊಳ್ಳುವ ಪ್ರತಿ ಕಾರ್ಯಕ್ರಮದಲ್ಲಿ ಶ್ರೀರಾಮ ಸೇನೆ ಪ್ರತಿರೋಧ ಒಡ್ಡಲಿದೆ ಎಂದು ಗುಡುಗಿದರು.
ಸ್ಮಶಾನದ ಎಂಟು ಎಕರೆ ಜಾಗವನ್ನು ಕಬಳಿಸುವ ಹುನ್ನಾರವೂ ಇದರಲ್ಲಿ ಅಡಗಿದೆ. ಈಗಾಗಲೇ ಹೈಕೋರ್ಟ್, ಸುಪ್ರಿಂ ಕೋರ್ಟ್ ನಲ್ಲಿ ಸ್ಮಶಾನ ಜಾಗ ಅನ್ಯ ಕೆಲಸಗಳಿಗೆ ಬಳಸಬಾರದು ಎಂಬ ಆದೇಶಗಳಾಗಿವೆ. ಒಂದು ವೇಳೆ ಸ್ಮಶಾನ ಜಾಗ ಬಿಟ್ಟು ಕೊಡದಿದ್ದರೆ ಕಾನೂನು ಹೋರಾಟಕ್ಕೂ ಸಿದ್ಧ ಎಂದು ಹೇಳಿದರು.
ಶಾಸಕರು ಹಿಂದು ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಇದನ್ನು ನಿಲ್ಲಿಸಬೇಕು ಎಂದೂ ಒತ್ತಾಯಿಸಿದರು.
ಶ್ರೀರಾಮಸೇನೆಯ ಉಪಾಧ್ಯಕ್ಷ ಗುಣಧರ, ಸಂಘಟನಾ ಕಾರ್ಯದರ್ಶಿ ಮಂಜು ಕಾಟಕರ, ಅಣ್ಣಪ್ಪ ದಿವಟಗಿ, ಮಹೇಶ ರೋಖಡೆ ಗೋಷ್ಠಿಯಲ್ಲಿದ್ದರು.