

ಹಿರೀಸಾವೆ: ಹೋಬಳಿಯ ಪುರಾಣ ಪ್ರಸಿದ್ಧ ಶ್ರೀಕ್ಷೇತ್ರ ಮಾದಲಗೆರೆ ಶ್ರೀ ಮಹದೇಶ್ವರ ಸ್ವಾಮಿಯ 89ನೇ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಯುಕ್ತ ಶ್ರೀ ಮಹದೇಶ್ವರ ಕ್ರೀಡಾಭಿಮಾನಿ ಬಾಯ್ಸ್ ವತಿಯಿಂದ ಆಯೋಜಿಸಿದ್ದ ಇತ್ತೀಚೆೆ ಹಗ್ಗ-ಜಗ್ಗಾಟ ಸ್ಪರ್ಧೆಯಲ್ಲಿ ಶೆಟ್ಟಿಹಳ್ಳಿ ತಂಡ ಪ್ರಥಮ ಸ್ಥಾನ ಪಡೆಯಿತು.
ಮಾದಲಗೆರೆ, ನಿಂಬೇಹಳ್ಳಿ, ಮಹದೇಶ್ವರ ಬಡಾವಣೆ, ಎಂ.ಕೆ.ಚಿಕ್ಕೇನಹಳ್ಳಿ, ಎಂ.ಕೆ.ಹೊಸೂರು, ಎಂ.ಕೆ.ರಂಗನಾಥಪುರ ಹಾಗೂ ಎಂ.ಕೆ.ಲಕ್ಷ್ಮೀಪುರ ಸೇರಿ ಏಳು ಒಕ್ಕಲು ಗ್ರಾಮಗಳ (ಬುಡಕಟ್ಟು) ಗ್ರಾಮಸ್ಥರಿಂದ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಕ್ರೀಡಾಕೂಟಗಳು ನಡೆದವು. ಶೆಟ್ಟಿಹಳ್ಳಿ, ಮಾದಲಗೆರೆ, ಹೊಸಹಳ್ಳಿ, ಗುಂಗರ ಮಳೆ, ನಿಂಬೇಹಳ್ಳಿ, ಎಂ.ಕೆ.ಹೊಸೂರು, ಬೆಳಗೀ ಹಳ್ಳಿ ಸೇರಿ ಸುಮಾರು 18 ತಂಡಗಳು ಭಾಗವಹಿಸಿದ್ದವು. ಒಂದಕ್ಕಿಂತ ಒಂದು ತಂಡ ಉತ್ತಮ ಪ್ರದರ್ಶನ ನೀಡಿದ್ದು, ನೆರೆದಿದ್ದ ಕ್ರೀಡಾಭಿಮಾನಿಗಳು ಸಿಳ್ಳೆ ಹಾಗೂ ಚಪ್ಪಾಳೆಯೊಂದಿಗೆ ಪ್ರೋತ್ಸಾಹ ನೀಡಿದರು.
ಹಗ್ಗ-ಜಗ್ಗಾಟದಲ್ಲಿ ಅಂತಿಮವಾಗಿ ಶೆಟ್ಟಿಹಳ್ಳಿ ಪ್ರಥಮ, ಹೊಸಹಳ್ಳಿ ದ್ವಿತೀಯ, ಗುಂಗರಮಳೆ ತೃತೀಯ, ನಿಂಬೇಹಳ್ಳಿ ಚತುರ್ಥ ಹಾಗೂ ಎಂ.ಕೆ.ಹೊಸೂರು ಐದನೇ ಸ್ಥಾನಕ್ಕೆ ಭಾಜನವಾಯಿತು. ಪ್ರಥಮ ಸ್ಥಾನ ಪಡೆದ ಶೆಟ್ಟಿಹಳ್ಳಿ ತಂಡಕ್ಕೆ ಟಗರು ಹಾಗೂ ಟ್ರೋಫಿ ನೀಡಲಾಯಿತು.
ಹೊಸಹಳ್ಳಿ ತಂಡಕ್ಕೆ ದ್ವಿತೀಯ ಬಹುಮಾನವಾಗಿ ಟ್ರೋಫಿ ಜತೆಗೆ 10 ಸಾವಿರ ರೂ. ನಗದು, ಗುಂಗರಮಳೆ ತಂಡಕ್ಕೆ ತೃತೀಯ ಬಹು ಮಾನವಾಗಿ ಟ್ರೋಫಿಯೊಂದಿಗೆ 5 ಸಾವಿರ ರೂ. ನಗದು, ನಿಂಬೇಹಳ್ಳಿ ತಂಡಕ್ಕೆ ಚತುರ್ಥ ಹಾಗೂ ಐದನೇ ಸ್ಥಾನ ಪಡೆದ ಎಂ.ಕೆ. ಹೊಸೂರು ತಂಡಕ್ಕೆ ಸಮಾಧಾನಕರ ಬಹುಮಾನ ನೀಡಿ ಅಭಿನಂದಿಸಲಾಯಿತು.
ಹುಲಿವಾಹನ ಸೇವೆ: ಸ್ಪರ್ಧೆ ಬಳಿಕ ಏಳು ಬುಡಕಟ್ಟು ಗ್ರಾಮಸ್ಥರಿಂದ ಶ್ರೀ ಮಾದೇಶ್ವರಸ್ವಾಮಿಯ ಹುಲಿವಾಹನ ಸೇವೆ ಜರುಗಿತು. ಎಂ.ಕೆ.ರಂಗನಾಥಪುರ ಗ್ರಾಮಸ್ಥರಿಂದ ಅನ್ನ ದಾಸೋಹ ನೆರವೇರಿತು. ಕುಂಭೇನಹಳ್ಳಿ ಕಪನೀಗೌಡರ ಸಾರಥ್ಯದಲ್ಲಿ ಕೋಲಾಟ ಕಾರ್ಯಕ್ರಮ ನಡೆಯಿತು. ಕೋಲಾಟ ಪ್ರದರ್ಶನ ನಡೆಸಿಕೊಟ್ಟ ತಂಡಕ್ಕೆ ಮಾನವ ಹಕ್ಕುಗಳ ತನಿಖಾ ಸಮಿತಿಯ ತಾಲೂಕು ಕಾರ್ಯದರ್ಶಿ ಎಂ.ಜೆ.ನಂಜೇಗೌಡ ಅಭಿನಂದಿಸಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ದಿನೇಶ್, ಕೋಡಿಲಿಂಗೇಗೌಡ, ಮಾಜಿ ಸದಸ್ಯ ಶಂಕರ್, ಮಾನವ ಹಕ್ಕುಗಳ ತನಿಖಾ ಸಮಿತಿ ತಾಲೂಕು ಅಧ್ಯಕ್ಷ ಆರ್.ಶ್ರೀನಿವಾಸ್ ಉಳ್ಳಾವಳ್ಳಿ, ಕಾರ್ಯದರ್ಶಿ ಎಂ.ಜೆ.ನಂಜೇಗೌಡ, ಪ್ರಮುಖರಾದ ಹೊಸೂರು ಹರೀಶ್ ಹಾಗೂ ಸುತ್ತಲ ಗ್ರಾಮಸ್ಥರು ಪಾಲ್ಗೊಂಡಿದ್ದರು.