

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಅವಳಿನಗರದ ನೀರು ಸರಬರಾಜು ಹೊಣೆಯನ್ನು ಎಲ್ ಆ್ಯಂಡ್ ಟಿ ಕಂಪನಿ ವಹಿಸಿಕೊಂಡ ನಂತರ ಸಮರ್ಪಕ ಪೂರೈಕೆಯಾಗುತ್ತಿಲ್ಲ. ಈ ಯೋಜನೆ ಜವಾಬ್ದಾರಿಯನ್ನು ಹಿಂಪಡೆದು ಮೊದಲಿನಂತೆ ಕರ್ನಾಟಕ ಜಲಮಂಡಳಿಗೆ ವಹಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮನವಿ ಮಾಡಿದ್ದಾರೆ.
ಈ ಕುರಿತು ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದಶಿರ್ಗೆ ಪತ್ರ ಬರೆದಿರುವ ಅವರು, ಅವಳಿನಗರದಲ್ಲಿ ನಿರಂತರ ಕುಡಿಯುವ ನೀರಿನ ಯೋಜನೆ ಅನುಷ್ಠಾನ ಕಾಮಗಾರಿ ನಡೆಯುತ್ತಿದೆ. ಇದರ ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡಿರುವ ಎಲ್ ಆ್ಯಂಡ್ ಟಿ ಕಂಪನಿಯು ಸಂರ್ಪೂಣ ವಿಲವಾಗಿದೆ. ಸರಿಯಾಗಿ ನೀರು ಸಿಗದೆ ಜನರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ.
ಈ ಮೊದಲು ಕರ್ನಾಟಕ ಜಲಮಂಡಳಿ ಮತ್ತು ಕೆಯುಐಡಿಎ್ಸಿ ಯವರು ಕುಡಿಯುವ ನೀರಿನ ಸರಬರಾಜು ಮತ್ತು ನಿರ್ವಹಣೆಯನ್ನು ಅತ್ಯಂತ ಯಶಸ್ವಿಯಾಗಿ ಮಾಡುತ್ತಿದ್ದರು.
ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ನೀರಿನ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದ್ದು, ಈ ಮುಂಚೆ ಜಲಮಂಡಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಹಂಗಾಮಿ ನೌಕರರು ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡುತ್ತ ಬಂದಿದ್ದಾರೆ. ಎರಡು ತಿಂಗಳಿಂದ ಹಂಗಾಮಿ ನೌಕರರ ವೇತನ ನೀಡದೇ ಇರುವುದರಿಂದ ಅವರು ಜೀವನ ನಡೆಸುವುದು ದುಸ್ತರವಾಗಿದೆ ಎಂದು ಶೆಟ್ಟರ್ ತಿಳಿಸಿದ್ದಾರೆ.
ಇದರ ಜತೆಗೆ ಹುಬ್ಬಳ್ಳಿ ವಿಭಾಗದ 150 ಹಾಗೂ ಧಾರವಾಡ ವಿಭಾಗದ 124 ಹಂಗಾಮಿ ನೌಕರರು ತಮ್ಮನ್ನು ಕಾಯಂ ಗೊಳಿಸುವಂತೆ ಸಲ್ಲಿಸಿರುವ ಮನವಿಯನ್ನು ಕರ್ನಾಟಕ ಉಚ್ಛ ನ್ಯಾಯಾಲಯ ಆಲಿಸಿ ಸೂಕ್ತ ನಿರ್ದೇಶನ ನೀಡಿದೆ.
ಈ ಹಿನ್ನೆಲೆಯಲ್ಲಿ ನೌಕರರನ್ನು ಕಾಯಂಗೊಳಿಸಬೇಕು. ಎರಡು ತಿಂಗಳ ವೇತನ ಬಿಡುಗಡೆ ಮಾಡಬೇಕು. ಕುಡಿಯುವ ನೀರು ಸರಬರಾಜು ಸಮರ್ಪಕವಾಗಿ ನಿರ್ವಹಿಸಲು ಕಂಪನಿಗೆ ಎಚ್ಚರಿಕೆ ನೀಡಬೇಕು ಎಂದು ಪತ್ರದಲ್ಲಿ ಕೋರಿದ್ದಾರೆ.