ಹುಬ್ಬಳ್ಳಿ: ಕೇಂದ್ರ ಸರ್ಕಾರವು ಪ್ರಸ್ತಾವಿತ ಹೊಸ ಬೆಂಗಳೂರು- ಮುಂಬೈ ಸೂಪರ್ ಫಾಸ್ಟ್ ರೈಲನ್ನು ರಾಜ್ಯದ ಪ್ರಮುಖ ನಗರಗಳ ಮೂಲಕ ಹಾಯ್ದು ಹೋಗುವಂತೆ ಕ್ರಮ ಕೈಗೊಳ್ಳಬೇಕೆಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಮನವಿ ಮಾಡಿದ್ದಾರೆ.
ಈ ಕುರಿತು ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಹಾಗೂ ವಿ. ಸೋಮಣ್ಣ ಅವರಿಗೆ ಪತ್ರ ಬರೆದಿರುವ ಅವರು, ಈ ರೈಲು ಬೆಂಗಳೂರು, ತುಮಕೂರು, ದಾವಣಗೆರೆ,- ಹಾವೇರಿ, ಹುಬ್ಬಳ್ಳಿ, ಧಾರವಾಡ, -ಬೆಳಗಾವಿ, ಮಿರಜ್-, ಪುಣೆ ಮಾರ್ಗವಾಗಿ ಸಂಚರಿಸಿದರೆ ಈ ಪ್ರದೇಶದ ಜನರ ಬಹುದಿನಗಳ ಬೇಡಿಕೆ ಈಡೇರಿಸಿದಂತಾಗುತ್ತದೆ ಎಂದು ತಿಳಿಸಿದ್ದಾರೆ.
ಬೆಂಗಳೂರು ನಂತರ ಎರಡನೇ ಅತಿದೊಡ್ಡ ನಗರವಾಗಿ ಬೆಳಗಾವಿ ಬೆಳೆದಿದೆ. ರಾಜ್ಯದ ಎರಡನೇ ರಾಜಧಾನಿ ಎಂದು ಪರಿಗಣಿಸಲಾಗಿದೆ. ಚಳಿಗಾಲದ ಅಧಿವೇಶನಗಳನ್ನು ಪ್ರತಿ ವರ್ಷವೂ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಸಲಾಗುತ್ತದೆ.
ಎರಡು ವಿಶ್ವವಿದ್ಯಾಲಯ, ಇಂಜಿನಿಯರಿಂಗ್ ಕಾಲೇಜುಗಳು, ವೈದ್ಯಕಿಯ ಕಾಲೇಜುಗಳು, ಪ್ರತಿಷ್ಠಿತ ಕೆಎಲ್ಇ ಸಂಸ್ಥೆ, ಕೈಗಾರಿಕೆಗಳು ಇಲ್ಲಿವೆ. ಹಾಗಾಗಿ ಪ್ರಸ್ತಾವಿತ ರೈಲು ಈ ಮಾರ್ಗದ ಮೂಲಕ ಸಂಚರಿಸಿದರೆ ಕರ್ನಾಟಕದ ಜನರಿಗೆ ಗಣನೀಯವಾಗಿ ಪ್ರಯೋಜನವಾಗಲಿದೆ. ರಾಜ್ಯದಲ್ಲಿ ಸುಮಾರು 650 ಕಿ.ಮೀ. (ಒಟ್ಟು 1200 ಕಿಮೀ.) ರೈಲು ಸಂಚರಿಸುತ್ತದೆ. ರಾಜ್ಯದ ಜನರ ಪರವಾಗಿ ಮನವಿ ಪರಿಗಣಿಸಬೇಕೆಂದು ಶೆಟ್ಟರ್ ಕೋರಿದ್ದಾರೆ.