

ಹುಬ್ಬಳ್ಳಿ: ಕಾಂಗ್ರೆಸ್ ತೊರೆದು ಬಿಜೆಪಿಗೆ ಮರಳಿದ ನಂತರ ನಗರಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ಭಾನುವಾರ ಭರ್ಜರಿ ಸ್ವಾಗತ ನೀಡಲಾಯಿತು.
ಇಲ್ಲಿಯ ಕುಸುಗಲ್ಲ ರಸ್ತೆ ಶ್ರೀನಿವಾಸ ಗಾರ್ಡನ್ ಬಳಿಯಿಂದ ಅದ್ದೂರಿ ಮೆರವಣಿಗೆ ಮೂಲಕ ಕರೆತಂದ ಕಾರ್ಯಕರ್ತರು ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಬದಾಮಿನಗರದ ಅವರ ಮನೆಯವರೆಗೂ ಬೈಕ್ ರ್ಯಾಲಿ ನಡೆಸಿದರು.
ಮಾಜಿ ಸಚಿವ ಶಂಕರಪಾಟೀಲ ಮುನೇನಕೊಪ್ಪ, ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡ್ರ, ಹುಡಾ ಮಾಜಿ ಅಧ್ಯಕ್ಷ ನಾಗೇಶ ಕಲಬುಗಿರ್, ವಾಯವ್ಯ ಸಾರಿಗೆ ಸಂಸ್ಥೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಸಾವಕರ ಇತರರು ಮೆರವಣಿಗೆಯಲ್ಲಿ ಜತೆಗಿದ್ದರು.
ಜಿಲ್ಲೆಯ ವಿವಿಧೆಡೆಯಿಂದ ನೂರಾರು ಕಾರ್ಯಕರ್ತರು ಶೆಟ್ಟರ್ ಸ್ವಾಗತಕ್ಕೆ ಆಗಮಿಸಿದ್ದರು. ದಾರಿಯುದ್ದಕ್ಕೂ ಸ್ವಾಗತ ಫಲಕಗಳು ರಾರಾಜಿಸುತ್ತಿದ್ದವು.
ಮರಳಿ ಮನೆಗೆ ಬಂದಿರುವೆ: ನಾಲ್ಕು ದಶಕದಿಂದ ಪಕ್ಷ ಕಟ್ಟಿ ಬೆಳೆಸಿದ್ದೆ, ಅನೇಕ ನಾಯಕರು, ಕಾರ್ಯಕರ್ತರು ಹಿರಿಯರನ್ನು ಕಳೆದುಕೊಂಡಂತಾಗಿದೆ, ನೀವು ನಮ್ಮ ಜತೆ ಇರಬೇಕು, ಮಾರ್ಗದರ್ಶನ ಮಾಡಬೇಕು ಎಂದು ಆಶಯ ವ್ಯಕ್ತಪಡಿಸಿದ್ದರಿಂದ ಮರಳಿ ಮನೆಗೆ ಬಂದಿರುವೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ತಿಳಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ವೈ. ವಿಜಯೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷರಾದ ನಂತರ ಪಕ್ಷಕ್ಕೆ ಬರುವಂತೆ ಅನೇಕರು ತಮ್ಮ ಹಂಬಲ ವ್ಯಕ್ತಪಡಿಸಿದ್ದರು. ಕಳೆದೊಂದು ತಿಂಗಳಿಂದ ಈ ಪ್ರಕ್ರಿಯೆ ನಡೆದಿತ್ತು. ರಾಷ್ಟ್ರೀಯ ನಾಯಕರು ಬರಲು ಸಹಮತ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಬಿ.ಎಸ್. ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಅಮಿತ್ ಶಾ, ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿದೆ. ಎಲ್ಲ ಕಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರಿಂದ ಯಾವುದೇ ಷರತ್ತು ಹಾಕದೇ ಪಕ್ಷಕ್ಕೆ ಮರಳಿದ್ದೇನೆ ಎಂದರು.
ಬೆಂಗಳೂರಿನಿಂದ ಹುಬ್ಬಳ್ಳಿಗೆ ಬರುವಾಗ ದಾವಣಗೆರೆ, ಹಾವೇರಿ, ರಾಣೆಬೆನ್ನೂರು ಎಲ್ಲ ಕಡೆ ಪಕ್ಷದ ನಾಯಕರು, ಕಾರ್ಯಕರ್ತರು ಸಂಭ್ರಮದಿಂದ ಸ್ವಾಗತಿಸಿದರು. ಹುಬ್ಬಳ್ಳಿಯಲ್ಲೂ ಹರ್ಷ ವ್ಯಕ್ತಪಡಿಸಿದ್ದಾರೆ ಎಂದರು.
ಅಂದು ಸ್ವಾಭಿಮಾನಕ್ಕೆ ಧಕ್ಕೆಯಾಗಿ ಹೊರಹೋಗಿದ್ದೆ. ಆದರೆ, ಈಗ ವಾತಾವರಣ ಬದಲಾಗಿದೆ. ಜಿಲ್ಲೆಯಲ್ಲಿ ಎರಡು ಶಕ್ತಿ ಕೇಂದ್ರ ಎಂಬುದಿಲ್ಲ. ಬಿಜೆಪಿ ಒಂದೇ ಇದೆ. ನನ್ನ ಸೇರ್ಪಡೆಗೆ ಕೆಲವರು ವಿರೋಧ ಮಾಡಿರುವ ಬಗ್ಗೆ ನನಗೆ ಗೊತ್ತಿಲ್ಲ ಎಂದರು.
ಹೈಕಮಾಂಡ್ ಹೇಳಿದರೆ ಸ್ಪರ್ಧೆ:
ಲೋಕಸಭೆ ಚುನಾವಣೆಗೆ ಟಿಕೆಟ್ ಕೇಳಿಲ್ಲ. ಒಂದು ವೇಳೆ ಹೈಕಮಾಂಡ್ ಹೇಳಿದರೆ, ಪಕ್ಷ ಜವಾಬ್ದಾರಿ ನೀಡಿದರೆ ಅದರಂತೆ ನಡೆದುಕೊಳ್ಳುವೆ ಎಂದು ಜಗದೀಶ ಶೆಟ್ಟರ್ ಹೇಳಿದರು. ಕಾಂಗ್ರೆಸ್ ಸೇರುವಾಗಲೂ ಯಾವುದೇ ಸ್ಥಾನಮಾನ ಕೇಳಿರಲಿಲ್ಲ. ಬಿಜೆಪಿಗೆ ಮರಳುವಾಗಲೂ ಅದೇ ರೀತಿ ಷರತ್ತು ಇಲ್ಲದೇ ಬಂದಿರುವೆ ಎಂದರು.
ಬಿಜೆಪಿಯಲ್ಲಿ ಕಚೇರಿ:
ಪಕ್ಕಕ್ಕೆ ಮರಳಿದ ನಂತರ ಮೊದಲ ಬಾರಿ ದೇಶಪಾಂಡೆನಗರದ ಬಿಜೆಪಿ ಕಚೇರಿಗೆ ಆಗಮಿಸಿದ ಜಗದೀಶ ಶೆಟ್ಟರ್ ಅವರು ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿದರು. ಶಾಸಕ ಮಹೇಶ ಟೆಂಗಿನಕಾಯಿ, ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ಪಾಲಿಕೆ ಸದಸ್ಯರಾದ ಮಲ್ಲಿಕಾರ್ಜುನ ಗುಂಡೂರ, ವೀರಣ್ಣ ಸವಡಿ, ಸಂತೋಷ ಚವ್ಹಾಣ, ರಾಜಣ್ಣ ಕೊರವಿ, ಮುಖಂಡರಾದ ದತ್ತಮೂತಿರ್ ಕುಲಕಣಿರ್, ಮಹೇಂದ್ರ ಕೌತಾಳ, ಕೃಷ್ಣಾ ಗಂಡಗಾಳೇಕರ, ಇತರರು ಸ್ವಾಗತಿಸಿದರು.