‘ಲೋಕ’ ಚುನಾವಣೆಗೆ ಸ್ಪರ್ಧಿಸಲು ರೆಡಿ ಎಂದ ಶೆಟ್ಟರ್

New Shettar New
Published on

ಹುಬ್ಬಳ್ಳಿ : ಲೋಕಸಭೆ ಚುನಾವಣೆ ಸ್ಪರ್ಧಿಸಲು ಈ ಮೊದಲು ಮೂರು ಬಾರಿ ಅವಕಾಶ ಬಂದಿದ್ದರೂ ನಿರಾಕರಿಸಿದ್ದೆ. ಆದರೆ, ಈ ಬಾರಿ ಜನರ ಒತ್ತಡದಿಂದ ಚುನಾವಣೆಗೆ ಸ್ಪರ್ಧಿಸುತ್ತೇನೆ. ಬಿಜೆಪಿ ವರಿಷ್ಠರು ಯಾವ ಕ್ಷೇತ್ರ ನಿಗದಿಪಡಿಸುತ್ತಾರೋ ಅಲ್ಲಿ ಕಣಕ್ಕೆ ಇಳಿಯಲು ಸಿದ್ಧ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದ್ದಾರೆ.

ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹಾವೇರಿ ಮತ್ತು ಬೆಳಗಾವಿಯಿಂದ ಸ್ಪರ್ಧಿಸುವಂತೆ ಅಲ್ಲಿನ ಜನರು ಕೇಳುತ್ತಿದ್ದಾರೆ. ಧಾರವಾಡ ಕ್ಷೇತ್ರದಿಂದಲೂ ಸ್ಪರ್ಧಿಸುವಂತೆ ಇಲ್ಲಿನ ಜನರ ಹೆಚ್ಚಿನ ಒತ್ತಡ ಇದೆ ಎಂದರು.

ನಾನು ಉಳಿದ ಯಾವುದೇ ಅಭ್ಯರ್ಥಿಗಳ ಬಗ್ಗೆ ಮಾತನಾಡುವುದಿಲ್ಲ. ಈ ಹಿಂದೆ ನನ್ನನ್ನು ಕಡೆಗಣಿಸಿದ್ದು ಸೇರಿದಂತೆ ಎಲ್ಲ ವಿಚಾರಗಳನ್ನು ಎಲ್ಲಿ ಹೇಳಬೇಕೊ, ಅಲ್ಲಿ ಹೇಳಿದ್ದೇನೆ. ಸ್ವಾಭಿಮಾನಕ್ಕೆ ಧಕ್ಕೆಯಾಗಿ ಬಿಜೆಪಿಯಿಂದ ಹೊರಹೋಗಿದ್ದೆ. ಆದರೂ, ಬಿಜೆಪಿ ನನ್ನ ಮೂಲ ಪಕ್ಷ. ಈ ಪಕ್ಷದ ಬಗ್ಗೆಯಾಗಲಿ, ರಾಷ್ಟ್ರೀಯ ನಾಯಕರ ಬಗ್ಗೆಯಾಗಲಿ ಎಲ್ಲಿಯೂ ಅಸಮಾಧಾನ ವ್ಯಕ್ತಪಡಿಸಿರಲಿಲ್ಲ. ಬಿಜೆಪಿ ರಾಷ್ಟ್ರೀಯ ನಾಯಕರೇ ನನ್ನನ್ನು ವಾಪಸ್ಸು ಕರೆದಿದ್ದಾರೆ. ಅವರಿಗೆ ಗೌರವ ಕೊಟ್ಟು ಮರಳಿ ಮೂಲ ಪಕ್ಷಕ್ಕೆ ಬಂದಿದ್ದೇನೆ ಎಂದು ಹೇಳಿದರು.

ರಾಜ್ಯ ಕಾಂಗ್ರೆಸ್ ಸರ್ಕಾರ ಬೀಳಿಸಲು ಶಾಸಕರಿಗೆ 50 ಕೋಟಿ ರೂ. ಆಮಿಷವನ್ನು ಬಿಜೆಪಿ ಒಡ್ಡುತ್ತಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹೇಳಿಕೆ ಸತ್ಯಕ್ಕೆ ದೂರವಾದದ್ದು. ಅವರದೇ ಪಕ್ಷದ ಶಾಮನೂರು ಶಿವಶಂಕರಪ್ಪ ಅವರೂ ಡಿ.ಕೆ. ಶಿವಕುಮಾರ ಅವರ ಹೇಳಿಕೆ ತಳ್ಳಿ ಹಾಕಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net