

ಉಡುಪಿ: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಕಾಂಗ್ರೆಸ್ ಪಕ್ಷ ಸೂಕ್ತ ಸ್ಥಾನಮಾನ ನೀಡಿತ್ತು. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ 35 ಸಾವಿರ ಮತಗಳಿಂದ ಸೋತರೂ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಲಾಗಿತ್ತು. ಈಗ ವಾಪಸ್ ಬಿಜೆಪಿಗೆ ಹೋಗಿರುವುದು ದಿಗ್ಭ್ರಮೆ ಮೂಡಿಸಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವೆ, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಆರ್. ಹೆಬ್ಬಾಳ್ಕರ್ ಹೇಳಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೆಟ್ಟರ್ ಅವರ ಗೆಲುವಿಗೆ ಸ್ಥಳಿಯ ಕಾಂಗ್ರೆಸ್ ಕಾರ್ಯಕರ್ತರು ಹಗಲಿರುಳು ಶ್ರಮಿಸಿದ್ದರು. ಶೆಟ್ಟರ್ ಕಾಂಗ್ರೆಸ್ ಪಕ್ಷವನ್ನು ಬಿಡಲು ಕಾರಣವೇನು? ಯಾಕಾಗಿ ಬಿಟ್ಟರು ಅನ್ನೋದಕ್ಕೆ ಅವರೇ ಉತ್ತರಿಸಬೇಕು. ರಾಜಕಾರಣದಲ್ಲಿ ಈ ರೀತಿ ಆಗಬಾರದು. ಇದು ಬಂದ ಪುಟ್ಟ, ಹೋದ ಪುಟ್ಟ ಅನ್ನೋ ಹಾಗೆ ಆಗಿದೆ ಎಂದರು.
ಲಕ್ಷ್ಮಣ್ ಸವದಿ ಬಿಡಲ್ಲ
ಶಾಸಕ ಲಕ್ಷ್ಮಣ ಸವದಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷವನ್ನು ಬಿಡುವುದಿಲ್ಲ. ಕಾಂಗ್ರೆಸ್ ನಲ್ಲೇ ಮುಂದುವರಿಯುತ್ತಾರೆ. ಸವದಿ ಅವರ ಸ್ವಾಭಿಮಾನಕ್ಕೆ ಬಿಜೆಪಿಯಲ್ಲಿ ಧಕ್ಕೆಯಾಗಿದ್ದಕ್ಕೆ ಅವರು ಕಾಂಗ್ರೆಸ್ ಸೇರಿದ್ದರು. ಅವರು ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ ಎಂದರು.
ಗ್ಯಾರಂಟಿ ಯೋಜನೆಯಿಂದ ಜನರಿಗೆ ನೆಮ್ಮದಿ
ರಾಜ್ಯದಲ್ಲಿ ಬರಗಾಲ ಆವರಿಸಿದೆ. ಇದರ ನಡುವೆಯೂ ಜನ ಸಾಮಾನ್ಯರು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ಇದಕ್ಕೆ ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳೇ ಕಾರಣ. ಇದುವರೆಗೂ 100 ಕೋಟಿ ಮಹಿಳೆಯರು ಶಕ್ತಿ ಯೋಜನೆಯ ಲಾಭ ಪಡೆದಿದ್ದಾರೆ. ಮುಂದಿನ ದಿನಗಳಲ್ಲಿ ಗ್ಯಾರಂಟಿ ಯೋಜನೆ ಬಗ್ಗೆ ಅಧ್ಯಯನ ಮಾಡಿ, ಮಹಿಳೆಯರ ಸಬಲೀಕರಣದ ಬಗ್ಗೆ ತಿಳಿದುಕೊಳ್ಳಲಾಗುವುದು ಎಂದರು.
ಸೂಕ್ತ ಅಭ್ಯರ್ಥಿಗಳು ಕಣಕ್ಕೆ
ಮುಂಬರುವ ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಸೂಕ್ತ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ಫೆ. 15ರ ವೇಳೆಗೆ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಮತ್ತೊಂದು ಹಂತದ ಚರ್ಚೆ ನಡೆಸಲಾಗುವುದು ಎಂದು ಸಚಿವೆ ತಿಳಿಸಿದರು.