

ಹುಬ್ಬಳ್ಳಿ : ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಬೊಕ್ಕಸ ಖಾಲಿಯಾಗುತ್ತಿದೆ ಎಂಬ ಬಿಜೆಪಿ ಮುಖಂಡರ ಆರೋಪದಲ್ಲಿ ಹುರುಳಿಲ್ಲ. ರಾಜ್ಯವನ್ನು ಆರ್ಥಿಕ ಅಧೋಗತಿಗೆ ತೆಗೆದುಕೊಂಡು ಹೋಗಿದ್ದು ಬಿಜೆಪಿ. ಹಿಂದಿನ ಸರ್ಕಾರ ತನ್ನ ಆಡಳಿತದ ಕೊನೆ ಘಳಿಗೆಯಲ್ಲಿ ಮನಬಂದಂತೆ ಟೆಂಡರ್ ಕರೆದು, ರಾಜ್ಯವನ್ನು ಲೂಟಿ ಮಾಡಿತು ಎಂದು ಮಾಜಿ ಮುಖ್ಯಮಂತ್ರಿ, ವಿಧಾನ ಪರಿಷತ್ ಸದಸ್ಯ ಜಗದೀಶ ಶೆಟ್ಟರ್ ಆರೋಪಿಸಿದರು.
ಇಲ್ಲಿನ ಕೇಶ್ವಾಪುರ ಶಬರಿ ನಗರದಲ್ಲಿ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಗೆ ಬುಧವಾರ ಚಾಲನೆ ನೀಡಿ, ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದಿದೆ. ಗ್ಯಾರಂಟಿ ಯೋಜನೆಗಳು ಯಾವುದೇ ಕಾರಣಕ್ಕೂ ಸ್ಥಗಿತಗೊಳ್ಳುವುದಿಲ್ಲ ಎಂದು ಭರವಸೆ ನೀಡಿದರು.
ರಾಜ್ಯ ಸರ್ಕಾರ ಇಡೀ ದೇಶಕ್ಕೆ ಮಾದರಿಯಾಗಿದೆ. ಕಾಂಗ್ರೆಸ್ನ ಗ್ಯಾರಂಟಿ ಯೋಜನೆಗಳು ಜನರ ಮನ ಗೆಲ್ಲುವಲ್ಲಿ ಸಫಲಗೊಂಡಿವೆ. ಗೃಹಲಕ್ಷ್ಮೀ ಯೋಜನೆ ಮುಖಾಂತರ ರಾಜ್ಯದ 1.20 ಕೋಟಿಗೂ ಹೆಚ್ಚು ಮಹಿಳೆಯರ ಬ್ಯಾಂಕ್ ಖಾತೆಗೆ 2 ಸಾವಿರ ರೂ. ಜಮೆ ಆಗಲಿದೆ ಎಂದರು.
ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಕಾಂಗ್ರೆಸ್ ಸರ್ಕಾರ ಈಡೇರಿಸಿದೆ. ಶಕ್ತಿಯೋಜನೆಯನ್ನು ಟೀಕಿಸುತ್ತಿರುವ ಪ್ರತಿಪಕ್ಷ ಬಿಜೆಪಿ, ಈ ಯೋಜನೆಯಿಂದ ಸಾರಿಗೆ ನಿಗಮಗಳಿಗೆ ಆಗುತ್ತಿರುವ ಲಾಭದ ಬಗ್ಗೆ ಅರಿತುಕೊಳ್ಳಬೇಕು. ಈ ಯೋಜನೆಯಿಂದಾಗಿ ಬಸ್ಗಳು ಪ್ರಯಾಣಿಕರಿಂದ ತುಂಬಿ ಸಂಚರಿಸುತ್ತಿವೆ. ಸರ್ಕಾರ ಸಾರಿಗೆ ನಿಗಮಗಳಿಗೆ ಹಣ ಮರುಪಾವತಿ ಮಾಡುತ್ತಿದೆ. ಇದರಿಂದ ಸಾರಿಗೆ ನಿಗಮಗಳಿಗೆ ಸಾಕಷ್ಟು ಲಾಭ ಆಗುತ್ತಿದೆ ಎಂದು ಹೇಳಿದರು.
ದೇಶದಲ್ಲಿ ಹಣದುಬ್ಬರ ಹೆಚ್ಚಾಗಿದೆ. ನಿತ್ಯೋಪಯೋಗಿ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇಷ್ಟಾದರೂ ಕೇಂದ್ರ ಸರ್ಕಾರ ಬೆಲೆಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಟೀಕಿಸಿದರು.
ಕಾಂಗ್ರೆಸ್ ಮುಖಂಡ ವಿರುಪಾಕ್ಷ ರಾಯನಗೌಡ್ರ, ಹುಡಾ ಮಾಜಿ ಅಧ್ಯಕ್ಷ ನಾಗೇಶ ಕಲಬುರ್ಗಿ, ಶಂಕರ ಸುಂಕದ, ಪಾಲಿಕೆ ಸಹಾಯಕ ಆಯುಕ್ತ ಬೇವೂರ ಹಾಗೂ ಇತರರು ಇದ್ದರು.