ಅಸ್ತಿತ್ವ ಕಳೆದುಕೊಳ್ಳುತ್ತಿರುವ ಬಿಜೆಪಿ

SHETTAR NEW
Published on

ಹುಬ್ಬಳ್ಳಿ : ಬಿಜೆಪಿ ದಿನದಿಂದ ದಿನಕ್ಕೆ ಅಧೋಗತಿಗೆ ಹೋಗುತ್ತಿದೆ. ಆ ಪಕ್ಷ ಅಸ್ತಿತ್ವ ಕಳೆದುಕೊಳ್ಳುತ್ತಿದ್ದು, ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಸ್ಮಶಾನ ಮೌನ ಆವರಿಸಿದೆ ಎಂದು ಮಾಜಿ ಮುಖ್ಯಮಂತ್ರಿ, ವಿಧಾನ ಪರಿಷತ್ ಸದಸ್ಯ ಜಗದೀಶ ಶೆಟ್ಟರ್ ಟೀಕಿಸಿದ್ದಾರೆ.

ನಗರದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾಗಿ 100 ದಿನಗಳು ಕಳೆದರೂ ಬಿಜೆಪಿಗೆ ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡಲು ಆಗಿಲ್ಲ. ಅದೊಂದು ಹಿರಿಯರಿಲ್ಲದ ಮನೆ. ಲೀಡರ್​ಲೆಸ್ ಪಾರ್ಟಿ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಬಿಜೆಪಿಯವರಿಗೆ ಸಹಿಸಲು ಆಗುತ್ತಿಲ್ಲ. ಹೀಗಾಗಿ, ನಮ್ಮ ಸರ್ಕಾರದ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಚುನಾವಣೆ ಸಮಯದ ಪ್ರಣಾಳಿಕೆಯಲ್ಲಿ ನೀಡಿದ್ದ ಗ್ಯಾರಂಟಿಗಳನ್ನು ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದೆ. ಉಚಿತ ಬಸ್ ಪ್ರಯಾಣ, 200 ಯುನಿಟ್ ಉಚಿತ ವಿದ್ಯುತ್, ಗೃಹಲಕ್ಷ್ಮೀ ಯೋಜನೆಗಳನ್ನು ಜನರು ಸ್ವಾಗತಿಸುತ್ತಿದ್ದಾರೆ ಎಂದರು.

ಫಲಾನುಭವಿಗಳನ್ನು ಸೇರಿಸಿ ಬಿಜೆಪಿ ಹಲವಾರು ಕಾರ್ಯಕ್ರಮಗಳನ್ನು ಈ ಹಿಂದೆ ಮಾಡಿದೆ. ಅದರಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಪಾಲ್ಗೊಂಡಿದ್ದರು. ಈಗ ಕಾಂಗ್ರೆಸ್ ಕಾರ್ಯಕ್ರಮಗಳನ್ನು ಟೀಕಿಸುತ್ತಿದ್ದಾರೆ. ಬಿಜೆಪಿ ಕಾರ್ಯಕ್ರಮಗಳನ್ನು ಅವರು ಮರೆತಂತಿದೆ ಎಂದು ವ್ಯಂಗ್ಯವಾಡಿದರು.

ಹಿಂದಿನ ಬಿಜೆಪಿ ಸರ್ಕಾರ ರಾಜ್ಯವನ್ನು ಆರ್ಥಿಕ ದಿವಾಳಿಗೆ ತಂದಿದೆ. ಆ ಪಕ್ಷದಲ್ಲಿ ಇದ್ದಾಗಲೂ ಸರ್ಕಾರದ ವಿರುದ್ಧ ಧ್ವನಿ ಎತ್ತಿದೆ. ಪಕ್ಷದ ಕೋರ್ ಕಮೀಟಿ ಸೇರಿದಂತೆ ಅವಕಾಶ ಸಿಕ್ಕಾಗಲೆಲ್ಲ ಸರ್ಕಾರದ ವಿರುದ್ಧ ಮಾತನಾಡುತ್ತಿದ್ದೆ ಎಂದು ಹೇಳಿದರು.

ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಕೇಂದ್ರ ಸರ್ಕಾರ ಗೃಹಬಳಕೆ ಸಿಲೆಂಡರ್ ಬೆಲೆಯಲ್ಲಿ 200 ರೂ. ಕಡಿತ ಮಾಡಿದೆ. ಇದು ಚುನಾವಣೆ ಗಿಮಿಕ್ ಅಲ್ಲವೇ ? ಎಂದು ಪ್ರಶ್ನಿಸಿದರು.

ಡಿಸೆಂಬರ್​ನಲ್ಲಿ ಚುನಾವಣೆ ನಡೆಯುವುದಾದರೆ ಕೇಂದ್ರ ಸರ್ಕಾರ ಮತ್ತಷ್ಟು ರಿಯಾಯಿತಿ ಅಥವಾ ಉಚಿತ ಯೋಜನೆಗಳನ್ನು ಘೋಷಿಸಬಹುದು ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನಾತ್ಮಕ ಕಾರ್ಯ ಮಾಡುತ್ತಿದೆ. ಬರೀ ಟೀಕೆ ಮಾಡುವುದನ್ನೇ ಗುರಿಯಾಗಿಟ್ಟುಕೊಂಡಿರುವ ಬಿಜೆಪಿ, ಇಂತಹ ಯೋಜನೆಗಳನ್ನು ಸ್ವಾಗತಿಸುವುದನ್ನು ಕಲಿಯಲಿ ಎಂದು ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net