

ಹುಬ್ಬಳ್ಳಿ:ಟಿಕೆಟ್ ತಪ್ಪಿಸಿದರೆ ಜಗದೀಶ ಶೆಟ್ಟರ್ ಮನೆಯಲ್ಲಿ ಸುಮ್ಮನೆ ಕುಳಿತಿರುತ್ತಾರೆ (ವಿಶ್ರಾಂತಿ ಪಡೆಯುತ್ತಾರೆ). ಬೇರೆ ಪಕ್ಷಕ್ಕೆ ಹೋಗುವುದಿಲ್ಲ ಎಂದು ಬಿಜೆಪಿಯವರು ಭಾವಿಸಿದ್ದರು. ಹೋದ ಮೇಲೆ ಏನು ಪರಿಣಾಮ ಆಗಿದೆ ಅಂತ ಈಗ ಅವರಿಗೆ ಗೊತ್ತಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಜಗದೀಶ ಶೆಟ್ಟರ್ ಕುಟುಕಿದರು.
ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕದಲ್ಲಿ ಬಿಜೆಪಿ 20-25 ಸೀಟು ಕಳೆದುಕೊಂಡಿತು. ಶೇ. 40 ಕಮಿಷನ್ ಆರೋಪಕ್ಕೆ ಬಿಜೆಪಿಯವರು ಉತ್ತರ ಕೊಡಲಿಲ್ಲ. ಭ್ರಷ್ಟಾಚಾರಕ್ಕೆ ಬೇಸತ್ತ ಜನರ ಆಕ್ರೋಶದ ಫಲವೇ ಚುನಾವಣೆ ಫಲಿತಾಂಶ ಎಂದರು.
ಬಿಜೆಪಿಯವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಕಾಂಗ್ರೆಸ್ ಸರ್ಕಾರದ ಪತನದ ಬಗ್ಗೆ ಮಾತನಾಡುವ ಬಿಜೆಪಿ ಮುಖಂಡರು, ಆಪರೇಷನ್ ಕಮಲದ ಬಗ್ಗೆ ಸ್ಪಷ್ಟನೆ ನೀಡಲಿ ಎಂದರು. ಕಾಂಗ್ರೆಸ್ ಸರ್ಕಾರವನ್ನು ಯಾರಿಂದಲೂ ಅಲುಗಾಡಿಸಲು ಸಾಧ್ಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.