

ವಿಜಯಪುರ: ಮಕ್ಕಳನ್ನು ನಿರ್ಲಕ್ಷಿಸಿದರೇ ದೇಶ ಅಭಿವೃದ್ಧಿಯಾಗುವುದಿಲ್ಲ. ಇಂದಿನ ಮಕ್ಕಳು ನಾಳಿನ ನಾಗರಿಕರಾಗಿರುವುದರಿಂದ ಅವರಿಗೆ ಅಭಿರುಚಿಯುಳ್ಳ ಶಿಕ್ಷಣ ನೀಡಬೇಕು ಎಂದು ಜಂಬುನಾಥ ಕಂಚ್ಯಾಣಿ ಹೇಳಿದರು.
ನಗರದ ಸರ್ಕಾರಿ ನೌಕರರ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬಂಡಾಯ ಕವಿ ಶೇಷರಾವ ಮಾನೆಯವರ ‘ನಿಲುಕದ ನಕ್ಷತ್ರ’ ಮಕ್ಕಳ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಕ್ಕಳ ಸಾಹಿತಿ ಹ.ಮ. ಪೂಜಾರ ಸಮಾರಂಭ ಉದ್ಘಾಟಿಸಿ, ಮಕ್ಕಳ ಸಾಹಿತ್ಯ ರಚನೆ ಸುಲಭದ ಮಾತಲ್ಲ. ಮಕ್ಕಳ ಭಾವನೆ, ಮನಸು ತಿಳಿದವರು ಮಾತ್ರ ಮಕ್ಕಳಿಗಾಗಿ ಬರೆಯಬಲ್ಲರು ಎಂದು ಹೇಳಿದರು.
ಡಾ.ಜಿ.ಡಿ. ಕೊಟ್ನಾಳ ಅಧ್ಯಕ್ಷತೆ ವಹಿಸಿದ್ದರು. ಆಲಮೇಲದ ಜಗದೇವಮಲ್ಲ ಬೊಮ್ಮಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕರ್ನಾಟಕ ಖಾದಿ ಗ್ರಾಮುದ್ಯೋಗ ಸಂಘದ ಅಧ್ಯಕ್ಷ ಬಾಪುಗೌಡ ಪಾಟೀಲ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸುರೇಶ ಶೇಡಶ್ಯಾಳ, ಚಿಂತಕ ಅಭಿಷೇಕ ಚಕ್ರವರ್ತಿ ಆಗಮಿಸಿದ್ದರು.
ಶಿವಾನಂದ ಮಂಗಾನವರ, ರವಿ ಕಿತ್ತೂರ, ಡಾ.ಸುಜಾತಾ ಚಲವಾದಿ, ಖಯ್ಯುಮ್ ಇನಾಮದಾರ್, ಅಂಬಾದಾಸ ಜೋಶಿ, ಶಿವಪುತ್ರಪ್ಪ ಅಜಮನೆ, ಎ.ಎಸ್. ಪಟೇಲ ಮತ್ತಿತರರನ್ನು ಸನ್ಮಾನಿಸಲಾಯಿತು.
ಗ್ರಂಥಕತೃ ಶೇಷರಾವ ಮಾನೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸುರೇಶ ಬಿಜಾಪುರ ನಿರೂಪಿಸಿದರು. ಹಯಾತ್ ರೋಜಿನದಾರ್ ವಂದಿಸಿದರು.