ಹಲವೆಡೆ ಮತಪತ್ರದಲ್ಲಿ ಗೊಂದಲ, ಜಿಲ್ಲಾಧಿಕಾರಿಗೆ ದೂರು

web 2
Published on

ಮೂಡಿಗೆರೆ: ಮತದಾರರ ಪಟ್ಟಿ ಬದಲಾವಣೆ, ಪಟ್ಟಿಯಿಂದ ಹೆಸರು ನಾಪತ್ತೆ, ಮಾದರಿ ಮತ ಪತ್ರ ನೀಡಿ ಮತಚಲಾವಣೆಗೆ ಪ್ರೇರಣೆ… ಮುಂತಾದ ಗೊಂದಲಗಳ ನಡುವೆ ತಾಲೂಕಿನ 22 ಗ್ರಾಪಂಗೆ ಶೇ.76.29 ರಷ್ಟು ಮತದಾನ ನಡೆದಿದೆ.

ಚಿನ್ನಿಗ ಗ್ರಾಪಂನ ಹೊಯ್ಸಳಲು ಗ್ರಾಮದಲ್ಲಿ ಮತ ಚಲಾವಣೆ ವೇಳೆ ಒಂದು ಗುಂಪಿನ ಮೂರು ಅಭ್ಯರ್ಥಿಗಳು ಮಾದರಿ ಮತಪತ್ರ ನೀಡಿ ಅದರಂತೆ ಮತ ಚಲಾಯಿಸುವಂತೆ ತಿಳಿಸಿದ್ದಾರೆ. ಕೆಲವರು ಅದನ್ನು ನೋಡಿ ಮತ ಚಲಾಯಿಸಿದಾಗ ಇನ್ನೆರಡು ಗುಂಪಿನ 6 ಅಭ್ಯರ್ಥಿಗಳು ಈ ಬಗ್ಗೆ ಪ್ರಶ್ನಿಸಿದ್ದಾರೆ. ಇದರಿಂದ ಸ್ಥಳದಲ್ಲಿ ಗೊಂದಲ ಉಂಟಾಗಿ ಮತದಾನ ಪ್ರಕ್ರಿಯೆ ಸ್ಥಗಿತಗೊಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರು. ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ತಿಳಿಗೊಳಿಸಿದರು. ನಂತರ ಸಹಜವಾಗಿ ಮತದಾನ ನಡೆದರೂ ಎರಡೂ ಗುಂಪಿನ ಅಭ್ಯರ್ಥಿಗಳು ಡಿಸಿಗೆ ದೂರು ನೀಡಲು ತೆರಳಿದರು.

ಹೆಸಗಲ್ ಗ್ರಾಪಂನ ಸುಶಾಂತ ನಗರದ 52 ಮತಗಳು ಸುಭಾಷ್ ನಗರದ ಮತದಾರರ ಪಟ್ಟಿಗೆ ಸೇರ್ಪಡೆಗೊಂಡಿದ್ದರಿಂದ ಗೊಂದಲ ಉಂಟಾಗಿತ್ತು. ಮತದಾರರ ಪಟ್ಟಿ ಗೊಂದಲದಿಂದ ಇಂದಿರಾನಗರ, ಘಟದಹಳ್ಳಿ ಗ್ರಾಮದ ಮತದಾರರು ಬೇರೆ ಬೇರೆ ಕ್ಷೇತ್ರದ ಅಭ್ಯರ್ಥಿಗೆ ಮತ ಚಲಾಯಿಸಬೇಕಾಯಿತು. ಕಿರುಗುಂದ, ಗೋಣಿಬೀಡು, ಹಂತೂರು, ಮಾಕೋನಹಳ್ಳಿ, ನಂದೀಪುರ, ಹಳೇಮೂಡಿಗೆರೆ, ಚಿನ್ನಿಗ ಗ್ರಾಪಂ ವ್ಯಾಪ್ತಿಯ 90 ಮತದಾರರಿಗೆ ಗುರುತಿನ ಚೀಟಿ ಇದ್ದರೂ ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲಾಗಿತ್ತು. ಇದರಿಂದ ಮತದಾರರು ಮತ ಚಲಾಯಿಸದೇ ವಾಪಸಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net