ಆ. 19ರಂದು ಕುರಿಗಾರರ ನಡಿಗೆ ವಿಧಾನ ಸೌಧದ ಕಡೆಗೆ; ಜಿಲ್ಲಾಧ್ಯಕ್ಷ ಬೀರಪ್ಪ ಜುಮನಾಳ

KURIGAHI SAMITI PRESS MEET
ವಿಜಯಪುರ ನಗರದ ಖಾಸಗಿ ಹೊಟೇಲ್‌ನಲ್ಲಿ ಸಾಂಪ್ರದಾಯಿಕ ಕುರಿಗಾಹಿಗಳ ಹಿತರಕ್ಷಣಾ ಕಾಯ್ದೆ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಬೀರಪ್ಪ ಜುಮನಾಳ ಸುದ್ದಿಗೋಷ್ಠಿ ನಡೆಸಿದರು. ರಾಜ್ಯ ಸಂಚಾಲಕ ಯಲ್ಲಪ್ಪ ಹೆಗಡೆ, ಬೀರಪ್ಪ ಸೊಡ್ಡಿ, ಸದು ಪೂಜಾರಿ ಮತ್ತಿತರರಿದ್ದಾರೆ.
Published on

ವಿಜಯಪುರ: ಕುರಿಗಾಹಿಗಳ ಮೇಲಿನ ಕೊಲೆ, ಸುಲಿಗೆ, ಅತ್ಯಾಚಾರ ತಡೆಗೆ ಸೂಕ್ತ ಕಾನೂನು ರೂಪಿಸುವ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಲು ಆ. 19 ರಂದು ‘ಕುರಿಗಾರರ ನಡಿಗೆ ವಿಧಾನ ಸೌಧದ ಕಡೆಗೆ’ ಎಂಬ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಸಾಂಪ್ರದಾಯಿಕ ಕುರಿಗಾಹಿಗಳ ಹಿತರಕ್ಷಣಾ ಕಾಯ್ದೆ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಬೀರಪ್ಪ ಜುಮನಾಳ ಹೇಳಿದರು.

ಕುರಿ ಕಾಯುವುದನ್ನೇ ಪ್ರಮುಖ ಉದ್ಯೋಗವನ್ನಾಗಿಸಿಕೊಂಡಿರುವ ಕುರಿಗಾರರ ಬದುಕು ಅತಂತ್ರವಾಗಿದೆ. ಕುರಿಗಾರರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಕುರಿ ಕಾಯುವ ಸಂದರ್ಭ ಅನೇಕ ಬಾರಿ ದೌರ್ಜನ್ಯ, ದಬ್ಬಾಳಿಕೆ ಹಾಗೂ ಹೆಣ್ಣು ಮಕ್ಕಳು ಅತ್ಯಾಚಾರಕ್ಕೂ ಒಳಗಾಗಿದ್ದಾರೆ. ಹೀಗಾಗಿ ಕುರಿಗಾರರ ಹಿತರಕ್ಷಣೆಗೆ ಸರ್ಕಾರ ಮುಂದಾಗಬೇಕಿದ್ದು, ಈ ನಿಟ್ಟಿನಲ್ಲಿ ಕಾನೂನು ಮತ್ತು ಯೋಜನೆ ರೂಪಿಸಲು ಆಗ್ರಹಿಸಲಾಗುತ್ತಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಕುರಿಗಾರರಿಗೆ ಸರ್ಕಾರದ ಸೌಲಭ್ಯಗಳು ಮರೀಚಿಕೆಯಾಗಿವೆ. ಅವರ ಮಕ್ಕಳಿಗೆ ಶಿಕ್ಷಣ ಸೌಲಭ್ಯಗಳಿಲ್ಲ, ಜೀವ ಭದ್ರತೆ ಇಲ್ಲ. ಪ್ರಾಕೃತಿಕ ಅವಘಡಗಳಿಂದಾಗಿ ಸಾವನ್ನಪ್ಪಿದಾಗ ಪರಿಹಾರ ಸೌಲಭ್ಯಗಳಿಲ್ಲ, ಕಾಡು ಪ್ರಾಣಿಗಳಿಂದ ಜೀವ ಹಾನಿಯಾದರೂ ಪರಿಹಾರ ಇಲ್ಲ. ಸಾಲ ಸೌಲಭ್ಯಗಳಿಲ್ಲ. ಹೀಗಾಗಿ ಕುರಿಗಾರರ ಹಿತರಕ್ಷಣೆಗಾಗಿ ಈ ಹಿಂದೆ ಸಿಎಂ ಆಗಿದ್ದ ಬಿ.ಎಸ್. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವಧಿಯಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿತ್ತು. ಆದರೂ, ಈವರೆಗೆ ಬೇಡಿಕೆ ಈಡೇರಿಲ್ಲ. ಹೀಗಾಗಿ ಕುರಿಗಾರರ ಬೇಡಿಕೆ ಈಡೇರಿಸಲು ಹೋರಾಟ ಅನಿವಾರ್ಯವಾಗಿದೆ ಎಂದರು.

ರಾಜ್ಯ ಸಂಚಾಲಕ ಯಲ್ಲಪ್ಪ ಹೆಗಡೆ ಮಾತನಾಡಿ, ರಾಜ್ಯದಲ್ಲಿ ಕುರಿಗಾರರ ಮೇಲೆ ನಿರಂತರ ದೌರ್ಜನ್ಯಗಳು ನಡೆಯುತ್ತಿವೆ ಎಂಬುದಕ್ಕೆ ಇತ್ತೀಚೆಗೆ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಉಗಲಾಟ ಗ್ರಾಮದ ಶರಣಪ್ಪ ಜಮ್ಮನಕಟ್ಟಿ, ಬೀದರ ಜಿಲ್ಲೆಯ ಬಸವ ಕಲ್ಯಾಣ ತಾಲೂಕಿನ ಪ್ರಭು ಮೇತ್ರೆ ಇವರ ಕೊಲೆಯೇ ಸಾಕ್ಷಿ. ಅಲ್ಲದೇ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಲಕ್ಷ್ಮಿ ಕಳ್ಳಿಮನಿ ಎಂಬ ಮಹಿಳೆಯನ್ನು ಅತ್ಯಾಚಾರ ಮಾಡಿ ಕ್ರೂರವಾಗಿ ಕೊಲೆ ಮಾಡಿದ ಪ್ರಕರಣ ಕುರಿಗಾಹಿಗಳ ಸ್ಥಿತಿಗೆ ಹಿಡಿದ ಕೈಗನ್ನಡಿ. ಹೀಗಾಗಿ ರಾಜ್ಯ ಸರ್ಕಾರ ಕುರಿಗಾಹಿಗಳ ರಕ್ಷಣೆಗೆ ಮುಂದಾಗಬೇಕಾಗಿದೆ ಎಂದರು.

ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಬೀರಪ್ಪ ಸೊಡ್ಡಿ, ಮುಖಂಡರಾದ ಸದು ಪೂಜಾರಿ, ದೇವಕಾಂತ ಬಿಜ್ಜರಗಿ, ಮಲ್ಲು ಬಿದರಿ, ಯಲ್ಲಪ್ಪ ಗುಂಡಕರ್ಜಗಿ, ರಾಜು ಎಂ.ಕಗ್ಗೋಡ, ಪಿ.ಕೆ. ಜಿದ್ದಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net