ಕುರುಬರು ಸೋಮವಾರ ಮದ್ಯಪಾನ ಮಾಡಬಾರದು, ಮಾಂಸ ಸೇವಿಸಬಾರದು.

9cbp4.jpg
Published on

ಚಿಕ್ಕಬಳ್ಳಾಪುರ: ಶಿಕ್ಷಣದಿಂದ ಮಾತ್ರ ಸರ್ವತೋಮುಖ ಸಾಧನೆ ತೋರಲು ಸಾಧ್ಯ ಎಂದು ಕನಕ ಗುರುಪೀಠ ಕಲಬುರುಗಿಯ ತಿಂಥಣಿ ಶಾಖಾ ಮಠದ ಶ್ರೀ ಸಿದ್ಧರಾಮಾನಂದಪುರಿ ಮಹಾಸ್ವಾಮೀಜಿ ತಿಳಿಸಿದರು.
ಚಿಕ್ಕಬಳ್ಳಾಪುರ ತಾಲೂಕಿನ ಮಂಚನಬಲೆಯಲ್ಲಿ ಶ್ರೀಬಿರೇಶ್ವರ, ಆನೇದೇವರು, ಚೌಡೇಶ್ವರಿ, ಸಿದ್ದೇದೇವರುಗಳ ಸೇವಾ ಮಂಡಳಿ ಟ್ರಸ್ಟ್ ವತಿಯಿಂದ ಕೈಗೊಂಡಿರುವ ದೊಡ್ಡ ಜಾತ್ರೆಯ ಮಹೋತ್ಸವದ ವೇದಿಕೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಹಾಲುಮತ ಸಮುದಾಯದ ಮಕ್ಕಳು ಜಾಗತಿಕ ಪ್ರಪಂಚದಲ್ಲಿ ಗುಣಮಟ್ಟದ ಶಿಕ್ಷಣ ಪಡೆಯಬೇಕು. ಇದರ ಮೂಲಕ ಉದ್ದಿಮೆದಾರರು, ರಾಜಕಾರಣಿ, ಸಮಾಜ ಸೇವಕರು ಸೇರಿದಂತೆ ಉನ್ನತ ಹುದ್ದೆಯನ್ನು ಅಲಂಕರಿಸುವಂತಾಗಬೇಕು ಎಂದರು.
ದೇವರಿಗೆ ದೊಡ್ಡವರು ಯಾರೂ ಇಲ್ಲ. ದೊಳ್ಳಾಸುರನಿಗೆ ಮುಕ್ತಿ ನೀಡಿದ್ದು ಬೀರದೇವರು. ಡೊಳ್ಳು ನಿಮಾರ್ಣ ಹೇಗೆ ಎಂಬುದನ್ನು ಬೀರಪ್ಪನ ಪರಂಪರೆಯ ಹೇಳುತ್ತದೆ. ದೇವರ ಹೆಸರಲ್ಲಿ ಎಂದೂ ಮಾಂಸಾಹಾರ ಮಾಡಬೇಡಿ. ಬೀರದೇವರ ಸಂಪ್ರದಾಯವು ಅಹಿಂಸೆಯಾಗಿದೆ. ಬೀರಪ್ಪ ದೇವರ ಗುಡಿ,ಮೈಲಾರಲಿಂಗ, ರೇವಣಸಿದ್ದೇಶ್ವರರ ಗುಡಿಯಲ್ಲಿ ಮಾಂಸಾಹಾರದ ಎಡೆ ನಡೆಯುವುದಿಲ್ಲ. ಕುರುಬರು ಯಾವುದೇ ಕಾರಣಕ್ಕೂ ಸೋಮವಾರ ಮದ್ಯಪಾನ ಮಾಡುವುದು, ಮಾಂಸಾಹಾರ ಸೇವಿಸುವುದು ಮಾಡಬಾರದು ಎಂದು ಸಲಹೆ ನೀಡಿದರು.
ಬ್ರಾಹ್ಮಣ, ಜೈನ, ಮುಸ್ಲಿಂ ಸಮುದಾಯ ಎಂದೂ ಕೂಡ ಮತಧರ್ಮಗಳನ್ನು ಮರೆಯುವುದಿಲ್ಲ. ಯಾರ ಮನೆಯಲ್ಲಿ ಸಂಪ್ರದಾಯ ಪಾಲಿಸುವರೋ ಅಲ್ಲಿ ಗಲಾಟೆ ಇರಲ್ಲ. ಹೀಗಾಗಿ ಮಕ್ಕಳಿಗೆ ಕಲೆ, ಸಂಪ್ರದಾಯ, ಸಂಸತಿ, ಸಂಸ್ಕಾರವನ್ನು ಕಲಿಸಬೇಕು ಎಂದರು.
ಉತ್ತರ ಕರ್ನಾಟಕದಲ್ಲಿ ಬೀರಲಿಂಗೇಶ್ವರ, ಮೈಲಾರಲಿಂಗೇಶ್ವರ ಗುಡಿಗಳಿಗೆ ಮಾತ್ರ ಎಲ್ಲ  ಸಮುದಾಯದವರೂ ಹೋಗುವ ಅವಕಾಶವಿದೆ. ಬೇರೆ ದೇವಾಲಯಗಳಲ್ಲಿ ಮಡಿ ಪಾಲನೆ ಇದೆ. ಆದರೆ, ನಮ್ಮಲ್ಲಿ ಇದಕ್ಕೆ ಅವಕಾಶವಿಲ್ಲ. ಕುರುಬರ ರಕ್ತದಲ್ಲಿ ಮೋಸವಂಚನೆ ಕಡಿಮೆ. ಇವತ್ತಿನ ಕಾಲದಲ್ಲಿ ರಾಜಕಾರಣಕ್ಕೆ ಯೋಗ್ಯರಾಗುವುದು ತುಂಬಾ ಕಷ್ಟವಾಗಿದೆ ಎಂದರು.
ಮುಖ್ಯಮಂತ್ರಿಗಳ ಆಪ್ತಕಾರ್ಯದರ್ಶಿ ಕೆ.ವಿ.ಪ್ರಭಾಕರ್ ಮಾತನಾಡಿ, ಹಬ್ಬ ಹರಿದಿನ ಜಾತ್ರೆಗಳಿಂದ  ಆಚಾರ ವಿಚಾರ, ಸಂಪ್ರದಾಯಗಳು ಉಳಿಯಲಿವೆ. ಇವು ಮುಖ್ಯವಾಗಿ ಸಂಭ್ರಮ, ಸಂಬಂಧಗಳನ್ನು ಬೆಸೆಯುತ್ತವೆ. ಆದರೆ, ತಾಂತ್ರಿಕತೆ ಬೆಳೆದಂತೆ ಮನುಷ್ಯ ಸಂಬಂಧಗಳು ಕಣ್ಮರೆಯಾಗುತ್ತಿವೆ. ಮೊಬೈಲ್ನಲ್ಲಿ ಮುಳುಗಿ ಸೌಜನ್ಯದಿಂದ ಮಾತನಾಡುವುದನ್ನು, ಗ್ರಾಮೀಣ ಕ್ರೀಡೆಯನ್ನು ಮರೆಯಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಹನೂರು ಶಾಸಕರಾದ ಮಂಜುನಾಥ್, ಬೀರೇಶ್ವರ, ಆನೆ ದೇವರು,ಚೌಡೇಶ್ವರಿ, ಸಿದ್ದೇದೇವರ ಸೇವಾ ಮಂಡಳಿ ಟ್ರಸ್ಟ್ ಗೌರವಾಧ್ಯಕ್ಷ ಎಸ್ ಜಗದೀಶ್ ಕುಮಾರ್, ಅಧ್ಯಕ್ಷರಾದ ಎಂ.ಪಿ.ಕೋದಂಡರಾಮಯ್ಯ, ಪ್ರಧಾನ ಕಾರ್ಯದರ್ಶಿ ಬಿ.ಎಂ ರವೀಂದ್ರನಾಥ್, ಖಜಾಂಚಿ ಎಂ.ಮಹೇಂದ್ರ, ಆಂತರಿಕ ಲೆಕ್ಕಪರಿಶೋಧಕರಾದ ಎಸ್.ಕೆ.ನಟರಾಜ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net