

ಮೊಳಕಾಲ್ಮೂರು: ಜಗದಕವಿ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವದ ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಾಯಕ (ವಾಲ್ಮೀಕಿ) ಸಮಾಜದ ಮುಖಂಡರು ಕಾರ್ಯಕ್ರಮವನ್ನು ಬಹಿಷ್ಕರಿಸಿ, ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ (ಎಸ್ಟಿ) ಸೇರ್ಪಡೆ ಮಾಡುವ ಪ್ರಸ್ತಾವನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಮನವಿ ಪತ್ರ ಸಲ್ಲಿಸುವ ಮೂಲಕ ಅವರು ರಾಜ್ಯ ಸರ್ಕಾರಕ್ಕೆ ಸ್ಪಷ್ಟ ಎಚ್ಚರಿಕೆ ನೀಡಿದರು.
ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಶಾಸಕ ಎನ್.ವೈ. ಗೋಪಾಲಕೃಷ್ಣ ಅವರು ಉದ್ಘಾಟನೆ ನೆರವೇರಿಸುತ್ತಿದ್ದಂತೆಯೇ, ಹಾಜರಿದ್ದ ಸಮಾಜದ ಮುಖಂಡರು ಎದ್ದು ನಿಂತು ತಮ್ಮ ವಿರೋಧವನ್ನು ವ್ಯಕ್ತಪಡಿಸಿ, ಮನವಿ ಪತ್ರ ನೀಡಿದರು.
ಪ್ರಸ್ತುತ ಎಸ್ಟಿ ಸಮುದಾಯವು ಬಹುಸಂಖ್ಯಾತವಾಗಿ ಬೆಳೆದಿದ್ದು, ಈಗಾಗಲೇ ಇರುವ ಮೀಸಲಾತಿಯಲ್ಲೂ ಸಮರ್ಪಕವಾಗಿ ಸಾಮಾಜಿಕ ನ್ಯಾಯ ಸಿಗುತ್ತಿಲ್ಲ. ಇದರ ನಡುವೆ ಕುರುಬ ಸಮುದಾಯವನ್ನು ಎಸ್ಟಿ ಪಟ್ಟಿಗೆ ಸೇರ್ಪಡೆ ಮಾಡುವುದು ನ್ಯಾಯಸಮ್ಮತವಲ್ಲ ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
"ಇದು ಜನಾಂಗದ ನಡುವೆ ಅಶಾಂತಿ ಹುಟ್ಟುಹಾಕುವ ರಾಜಕೀಯ ಕುತಂತ್ರ. ಸರ್ಕಾರವು ಜೇನುಗೂಡಿಗೆ ಕೈಹಾಕಿ ಸುಟ್ಟುಕೊಳ್ಳುವ ಮುನ್ನವೇ ಇದನ್ನು ಗಂಭೀರವಾಗಿ ಪರಿಗಣಿಸಿ, ಕೂಡಲೇ ಈ ನಿರ್ಧಾರವನ್ನು ಕೈಬಿಡಬೇಕು" ಎಂದು ಅವರು ಒಕ್ಕೂರಲಿನಿಂದ ಆಗ್ರಹಿಸಿದರು.
ಶಾಸಕ ಎನ್.ವೈ. ಗೋಪಾಲಕೃಷ್ಣ ಅವರು "ಇದು ಮನೆ ದೇವರ ಜಾತ್ರೆ ಕಾರ್ಯಕ್ರಮ, ತಾಳ್ಮೆಯಿಂದ ಕುಳಿತುಕೊಳ್ಳಿ" ಎಂದು ಮನವಿ ಮಾಡಿದರೂ, ಸರ್ಕಾರದ ನಿರ್ಧಾರಕ್ಕೆ ಧಿಕ್ಕಾರ ಕೂಗುತ್ತಾ ಮುಖಂಡರು ವೇದಿಕೆಯಿಂದ ಹೊರನಡೆದರು.
ಶಾಸಕರು ಮತ್ತು ಗಣ್ಯರಿಂದ ಸಮಜಾಯಿಷಿ
ಮುಖಂಡರು ಕಾರ್ಯಕ್ರಮ ಬಹಿಷ್ಕರಿಸಿದ ಬಳಿಕ ಮಾತನಾಡಿದ ಶಾಸಕ ಎನ್.ವೈ. ಗೋಪಾಲಕೃಷ್ಣ, ಪರಿಶಿಷ್ಟ ಪಂಗಡಕ್ಕೆ ಕುರುಬ ಸಮುದಾಯ ಸೇರ್ಪಡೆ ವಿಚಾರಕ್ಕೆ ರಾಜ್ಯದಾದ್ಯಂತ ದೊಡ್ಡಮಟ್ಟದ ವಿರೋಧ ವ್ಯಕ್ತವಾಗಿರುವ ಬಗ್ಗೆ ಸರ್ಕಾರಕ್ಕೂ ಬಿಸಿ ತಟ್ಟಿದೆ ಎಂಬುದನ್ನು ಒಪ್ಪಿಕೊಂಡರು.
* ರಾಜಕೀಯ ಕುತಂತ್ರ: "ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ ಅವರು ಉತ್ತರ ಕರ್ನಾಟಕ ಭಾಗದ ಓಟ್ ಬ್ಯಾಂಕ್ ಗಟ್ಟಿ ಮಾಡಿಕೊಳ್ಳಲು ಹುಟ್ಟುಹಾಕಿದ ಕುರುಬರ ಸೇರ್ಪಡೆ ಕುತಂತ್ರ ಈಗ ಮುನ್ನೆಲೆಗೆ ಬಂದಿದೆ. ಇದು ಕೇವಲ ಉಹಾಪೋಹ ಅಷ್ಟೇ. ಇದರಲ್ಲಿ ಸಿದ್ದರಾಮಯ್ಯ ಅವರ ಪಾತ್ರ ಇಲ್ಲ," ಎಂದು ಸ್ಪಷ್ಟೀಕರಣ ನೀಡಿದರು.
* ಕಾನೂನಾತ್ಮಕ ನಿಯಮ: "ಸಂವಿಧಾನದ ಮೀಸಲಾತಿ ಹಕ್ಕನ್ನು ಕಿತ್ತುಕೊಳ್ಳಲು ಯಾರಿಗೂ ಸಾಧ್ಯವಿಲ್ಲ. ಇದಕ್ಕಾಗಿ ಕಾನೂನಾತ್ಮಕವಾಗಿ ಬುಡಕಟ್ಟು ಸಂಸ್ಕೃತಿ ಪರಂಪರೆಯ ಕುಲಶಾಸ್ತ್ರೀಯ ಅಧ್ಯಯನದ ನಿಯಮಾವಳಿಗಳಿವೆ. ನಮ್ಮ ಸಮುದಾಯದ ಹಿತಾಸಕ್ತಿ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ," ಎಂದು ಭರವಸೆ ನೀಡಿದರು.
ದ್ರಾಕ್ಷರಸ ಮಂಡಳಿ ಅಧ್ಯಕ್ಷ ಡಾ. ಯೋಗೇಶ್ ಬಾಬು ಮಾತನಾಡಿ, "ಎಸ್ಟಿಗೆ ಕುರುಬರ ಸೇರ್ಪಡೆ ಎಂಬುದು ಸರ್ಕಾರದ ನಿರ್ಧಾರವಲ್ಲ. ಇದು ಉನ್ನತ ಅಧಿಕಾರಿಗಳ ಸಭೆಯಲ್ಲಿ ಹುಟ್ಟಿಕೊಂಡ ಕೂಗು ದೊಡ್ಡದಾಗಿ ಬೆಳೆದಿದೆ. ಈ ಬಗ್ಗೆ ಸಿಎಂ ಮತ್ತು ಡಿಸಿಎಂ ಅವರಿಗೂ ಮನವರಿಕೆಯಾಗಿದೆ. ಜನಾಂಗದ ಹಿತವನ್ನು ಕಾಪಾಡಲು ನಾವೆಲ್ಲಾ ಒಗ್ಗಟ್ಟಾಗಿ ನಿಲ್ಲುತ್ತೇವೆ" ಎಂದು ಮುಖಂಡರಿಗೆ ಭರವಸೆ ನೀಡಿದರು.
ಜಯಂತ್ಯುತ್ಸವ ಮೆರವಣಿಗೆಯ ವೈಭವ
ವೇದಿಕೆಯ ಕಾರ್ಯಕ್ರಮಕ್ಕೂ ಮುನ್ನ ಮಹರ್ಷಿ ವಾಲ್ಮೀಕಿ ಭಾವಚಿತ್ರದ ಮೆರವಣಿಗೆಯು ಪಟ್ಟಣದ ರಾಜಬೀದಿಗಳಲ್ಲಿ ಅದ್ದೂರಿಯಾಗಿ ನಡೆಯಿತು. ಉರುಮೆ, ತಮಟೆ ವಾದ್ಯಗಳ ನಾದ ಮತ್ತು ಮೈಕ್ ಸದ್ದಿಗೆ ಸಮುದಾಯದ ಜನರು ಕುಣಿದು ಕುಪ್ಪಳಿಸಿದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಟಿ. ಜಗದೀಶ್, ತಾಪಂ ಇಒ ಎಚ್.ಹನುಮಂತಪ್ಪ, ಬಿಇಒ ನಿರ್ಮಲಾದೇವಿ, ಸಮಾಜ ಕಲ್ಯಾಣಧಿಕಾರಿ ಸೈಯಾದ್ ನಾಸೀರ್, ಹಾಗೂ ಮುಖಂಡರಾದ ಕೆ. ಜಗಲೂರಯ್ಯ, ಗುರುರಾಜಣ್ಣ, ಪಟೇಲ್ ಪಾಪನಾಯಕ, ಎಸ್. ಬಡೋಬನಾಯಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಇದನ್ನೂ ಓದಿ: